– ಭಾರತಕ್ಕಾಗಿ ಕಂಚಿನ ಪದಕ ಗೆದ್ದಿದ್ದ ಶಾರ್ಟ್ ಪುಟ್ ಆಟಗಾರ
ವಾಷಿಂಗ್ಟನ್: ಭಾರತದ ಮಾಜಿ ಕ್ರೀಡಾಪಟು ಇಕ್ಬಾಲ್ ಸಿಂಗ್ ಬೋಪಾರೈ ತನ್ನ ತಾಯಿ ಮತ್ತು ಪತ್ನಿಯನ್ನು ಅಮೆರಿಕದಲ್ಲಿರುವ ತನ್ನ ಮನೆಯಲ್ಲಿ ಕೊಲೆ ಮಾಡಿದ್ದಾರೆ.
ಇಕ್ಬಾಲ್ ಸಿಂಗ್ 1983ರಲ್ಲಿ ಕುವೈತ್‍ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಶಾಟ್ ಪುಟ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ತಂದಿದ್ದರು. ಜೊತೆಗೆ 1988ರಲ್ಲಿ ನವದೆಹಲಿಯಲ್ಲಿ ನಡೆದ ಕ್ರೀಡಾಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಭಾರತದ ಸಾರ್ವಕಾಲಿಕ ಟಾಪ್-20 ಶಾಟ್‍ಪುಟ್ ಪಟ್ಟಿಯಲ್ಲಿ ಸಿಂಗ್ ಸ್ಥಾನ ಪಡೆದುಕೊಂಡಿದ್ದರು.
62 ವರ್ಷದ ಸಿಂಗ್ ಕುಟುಂಬದೊಂದಿದೆ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ ತನ್ನ ತಾಯಿ ಮತ್ತು ಪತ್ನಿಯನ್ನು ಕೊಲೆ ಮಾಡಿರುವ ಅವರು, ತಾನೇ ತನ್ನ ಮಗನಿಗೆ ಕರೆ ಮಾಡಿ ನಿನ್ನ ತಾಯಿ ಮತ್ತು ಅಜ್ಜಿಯನ್ನು ಕೊಲೆ ಮಾಡಿದ್ದೇನೆ. ಪೊಲೀಸರಿಗೆ ತಿಳಿಸು ಎಂದು ಹೇಳಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೆನ್ಸಿಲ್ವೇನಿಯಾದ ನ್ಯೂಟನ್ ಸ್ಕ್ವೇರ್ ಪೊಲೀಸರು ಇಕ್ಬಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.
ಸಿಂಗ್ ಅವರು ಕರೆ ಮಾಡುತ್ತಿದಂತೆ ಪೊಲೀಸರು, ಪೆನ್ಸಿಲ್ವೇನಿಯಾದ ನ್ಯೂಟೌನ್ ಟೌನ್‍ಶಿಪ್‍ನಲ್ಲಿರುವ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಇಕ್ಬಾಲ್ ಸಿಂಗ್ ಚೂರಿ ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಕುಳಿತಿದ್ದರು. ಒಳಗೆ ಹೋಗಿ ನೋಡಿದಾಗ ಇಬ್ಬರು ಮಹಿಳೆಯರ ಶವಗಳು ಕಂಡು ಬಂದವು. ಆಗ ನಾವು ಸಿಂಗ್ ಅವರನ್ನು ಬಂಧಿಸಿ ಕರೆದುಕೊಂಡು ಬಂದೆವು ಎಂದು ಪೆನ್ಸಿಲ್ವೇನಿಯಾದ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಸಿಂಗ್ ಅವರು ಆತ್ಮೀಯ ಗೆಳೆಯ, ವಿಷಯ ತಿಳಿದು ನನಗೆ ಶಾಕ್ ಆಗಿದೆ. ಇಕ್ಬಾಲ್ ಸಿಂಗ್ ಬಹಳ ಒಳ್ಳೆಯ ಮನುಷ್ಯ. ಆತ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆತನ ಮಡದಿ ಕೂಡ ಬಹಳ ಒಳ್ಳೆಯವರು. ಆದರೆ ಏನು ತಪ್ಪು ನಡೆದಿದೆ ಎಂಬುದು ನನಗೂ ಗೊತ್ತಿಲ್ಲ. ನಾನು ಕೂಡ ವಿಷಯ ತಿಳಿದು ಶಾಕ್‍ಗೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.