ಮಡಿಕೇರಿ: ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ, ನನ್ನ ತಾಯಿ ನೆನೆಪುಗಳು ಇರುವ ಮೊಬೈಲ್ ಫೋನ್ ಅನ್ನು ದಯವಿಟ್ಟು ಹಿಂದಿರುಗಿಸಿ ಎಂದು ಪುಟ್ಟ ಬಾಲಕಿಯೊಬ್ಬಳು ಎಲ್ಲರ ಮನಕಲಕುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದಿದ್ದಾಳೆ.
Advertisement
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಮಗಳು ಹೃತೀಕ್ಷಾ ಹೀಗೆ ಎಲ್ಲರ ಕರುಳು ಹಿಂಡುವಂತೆ ಪತ್ರ ಬರೆದಿರುವ ಪುಟ್ಟ ಬಾಲಕಿಯಾಗಿದ್ದಾಳೆ. ಮೇ 6 ರಂದು ಬಾಲಕಿ ಹೃತೀಕ್ಷಾ ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊರೊನಾ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಆದರೆ ಪ್ರಭಾ ಅವರಿಗೆ ಚಿಕಿತ್ಸೆ ಫಲಿಸದೆ ಮೇ 16ರಂದು ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಲಿಲ್ಲ. ಆ ಫೋನ್‍ನಲ್ಲಿ ನನ್ನ ತಾಯಿಯ ನೆನಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿ ಕೊಡಿ ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಎಂದು ಬಾಲಕಿ ಹೃತೀಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ.
Advertisement