ಧಾರವಾಡ: ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾದ ಘಟನೆ ಧಾರವಾಡ ಜಿಲ್ಲೆಯ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ತಾಯಿ ತೀರಿಕೊಂಡ ಮೂರೇ ದಿನಕ್ಕೆ ಅಣ್ಣ, ತಮ್ಮ ಕೂಡಾ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಹಾರೋಬೆಳವಡಿಯ ಕಡ್ಲಿ ಕುಟುಂಬದಲ್ಲಿ ಮೂವರನ್ನು ಕೊರೊನಾ ಬಲಿ ತೆಗೆದುಕೊಂಡಿದ್ದು, ಮೂರು ದಿನಗಳ ಹಿಂದೆ ಶಾಂತಮ್ಮ ಕಡ್ಲಿ (75) ಕೊರೊನಾದಿಂದಾಗಿ ಮೃತಪಟ್ಟಿದ್ದರು. ಇಂದು ಅವರ ಇಬ್ಬರು ಪುತ್ರರಾದ ಕಲ್ಲಪ್ಪ ಕಡ್ಲಿ (49), ನಾಗನಗೌಡ ಕಡ್ಲಿ (42) ಕೂಡ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಈ ಇಬ್ಬರು ಸಹೋದರರು ವಾಕರಸಾ ಸಂಸ್ಥೆಯ ಧಾರವಾಡ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಾಂತಮ್ಮ ಕಡ್ಲಿ ಅವರಿಗೆ ಕೊರೊನಾ ಪಾಸಿಟಿವ್ ಆಗುತ್ತಿದ್ದಂತೆ ಪುತ್ರರಾದ ಕಲ್ಲಪ್ಪಕಡ್ಲಿ ಮತ್ತು ನಾಗನಗೌಡ ಕಡ್ಲಿ ಆಸ್ಪತ್ರೆಗೆ ಸೇರಿಸಲೆಂದು ಓಡಾಡಿದ್ದರು. ಆ ಸಮಯದಲ್ಲಿ ಇವರಿಗೆ ಕೊರೊನಾ ಸೋಂಕು ತಗಲಿರುವ ಸಾಧ್ಯತೆ ಇದೆ. ಇವರ ನಿಧನದಿಂದ ಮೂರೇ ದಿನದಲ್ಲಿ ಒಂದೇ ಕುಟುಂಬದವರು ಸಾವಾಗಿದ್ದಕ್ಕೆ ಇಡೀ ಗ್ರಾಮದಲ್ಲಿ ಆತಂಕ ಆವರಿಸಿದೆ.