ತಾಯಿಯ ಹೆಸರಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾದ ಸೋನು ಸೂದ್

Public TV
2 Min Read
Sonu Sood

– ವಿದ್ಯಾರ್ಥಿಗಳಿಗೆ ಒಂದೇ ಒಂದು ಷರತ್ತು ವಿಧಿಸಿದ ನಟ

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಕೊರೊನಾ ಹಿನ್ನೆಲೆ ಲಾಕ್‍ಡೌನ್ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ದಿವಂಗತ ತಾಯಿಯ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮಕ್ಕಳಿಗೆ ಮೊಬೈಲ್ ಕಳುಹಿಸಿದ ಸೋನು ಸೂದ್

Sonu sood B

ನಟ ಸೋನು ಸೂದ್ ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದ್ದರು. ಅಲ್ಲದೇ ವಿದೇಶದಲ್ಲಿ ಸಿಲುಕಿಕೊಂಡಿದ್ದವರಿಗೆ ನೆರವು ನೀಡಿದ್ದರು. ಬಡ ರೈತ ಕುಟುಂಬವೊಂದಕ್ಕೆ ಟ್ರ್ಯಾಕ್ಟರ್ ಕೊಡಿಸಿದ್ದರು. ಇದೇ ರೀತಿ ಅನೇಕರಿಗೆ ಸೋನು ಸೂದ್ ಇಂದಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ತಮ್ಮ ದಿವಂಗತ ತಾಯಿ ಸರೋಜ್ ಸೂದ್ ಅವರ ಹೆಸರಿನಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

sonu sood

ಈ ಬಗ್ಗೆ ಮಾತನಾಡಿದ ಸೋನು ಸೂದ್, “ಕಳೆದ ಕೆಲವು ತಿಂಗಳುಗಳಲ್ಲಿ ಬಡವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಹೇಗೆ ಹೆಣಗಾಡುತ್ತಿದ್ದಾರೆಂದು ನಾನು ನೋಡಿದ್ದೇನೆ. ಕೆಲವರಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಫೋನ್‍ಗಳಿಲ್ಲ. ಇತರರಿಗೆ ಶುಲ್ಕವನ್ನು ಪಾವತಿಸಲು ಹಣವಿಲ್ಲ. ಆದ್ದರಿಂದ ನನ್ನ ತಾಯಿ ಪ್ರೊಫೆಸರ್ ಸರೋಜ್ ಸೂದ್ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡಲು ನಾನು ದೇಶಾದ್ಯಂತದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ” ಎಂದು ಹೇಳಿದರು.

SONU SOOD

“ವಾರ್ಷಿಕ ಆದಾಯವು 2 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು ಎಂದು ನಟ ಷರತ್ತು ವಿಧಿಸಿದ್ದಾರೆ. ಅಂತವರ ಎಲ್ಲಾ ವೆಚ್ಚಗಳು, ಕೋರ್ಸ್ ಶುಲ್ಕಗಳು, ಹಾಸ್ಟೆಲ್ ವಸತಿ ಮತ್ತು ಆಹಾರ ಎಲ್ಲವನ್ನು ನೋಡಿಕೊಳ್ಳಲಾಗುತ್ತದೆ ಎಂದು ಸೋನು ಸೂದ್ ತಿಳಿಸಿದರು.

sonu sood 1 medium

ವರದಿಗಳು ಪ್ರಕಾರ, ವಿದ್ಯಾರ್ಥಿವೇತನವು ಮೆಡಿಸಿನ್, ಎಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್ ಮತ್ತು ಆಟೋಮೇಷನ್, ಸೈಬರ್ ಸೆಕ್ಯೂರಿಟಿ, ಡಾಟಾ ಸೈನ್ಸ್, ಫ್ಯಾಶನ್, ಪತ್ರಿಕೋದ್ಯಮ ಮತ್ತು ಬಿಸಿನೆಸ್ ಸ್ಟಡೀಸ್ ಕೋರ್ಸ್ ನ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ.

https://www.instagram.com/p/CEvZOsdgfci/?utm_source=ig_embed

ನಮ್ಮ ತಾಯಿ ಸರೋಜ್ ಸೂದ್ ಅವರು ಮೊಗಾ (ಪಂಜಾಬ್) ನಲ್ಲಿ ಉಚಿತವಾಗಿ ಬೋಧಿಸುತ್ತಿದ್ದರು. ಅವರು ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದ್ದರು. ಅದಕ್ಕೆ ಈಗ ಸರಿಯಾದ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಶಿಕ್ಷಕರ ದಿನದಂದು ನಟ ಸೋನು ಸೂದ್ ಅವರು ತಮ್ಮ ತಾಯಿಯ ಫೋಟೋವನ್ನು ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದರು. ಅಲ್ಲದೇ “ನಾನು ನಮ್ಮ ತಾಯಿ ತೋರಿಸಿದ ಹಾದಿಯಲ್ಲಿ ನಡೆಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು.

sonu sood 4

ಇತ್ತೀಚೆಗಷ್ಟೆ ಕರ್ನಾಟಕದಲ್ಲಿ ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ, ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾ ಕುಟುಂಬಕ್ಕೆ ನಟ ಸೋನು ಸೂದ್ ಕೊಟ್ಟ ಮಾತಿನಂತೆ ಸಹಾಯವನ್ನು ಮಾಡಿದ್ದರು. ಪದ್ಮಾ ದಂಪತಿಗೆ ಏಕಕಾಲದಲ್ಲಿ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಪಬ್ಲಿಕ್ ಟಿವಿ ಮೂಲಕ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್‍ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ ರೇಷನ್ ನೀಡುವ ಭರವಸೆ ನೀಡಿದ್ದರು. ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *