ಹಾವೇರಿ: ಮಗನೇ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿ ನಂತರ ಅಮ್ಮನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ರಸ್ತೆಯಲ್ಲಿ ನಡೆದಿದೆ.
ಹತ್ಯೆಯಾದ ತಾಯಿಯನ್ನು 35 ವರ್ಷ ವಯಸ್ಸಿನ ಪಾರವ್ವ ಲಮಾಣಿ ಅಂತಾ ಗುರುತಿಸಲಾಗಿದೆ. ಆಕೆಯ ಪುತ್ರ 21 ವರ್ಷದ ಶಿವಪ್ಪ ಲಮಾಣಿ ಎಂಬಾತನೇ ತಾಯಿಯನ್ನು ಹತ್ಯೆ ಮಾಡಿದ ಪುತ್ರ. ನವೆಂಬರ್ 12ರಂದು ತಾಯಿಯನ್ನು ಕರೆದುಕೊಂಡು ಬಂದಿದ್ದ ಪುತ್ರ ಗಂಗಿಬಾವಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ಹತ್ಯೆ ಮಾಡಿ ಪರಾರಿಯಾಗಿದ್ದನು.
ಮರುದಿನ ಆಕೆಯ ಮೃತದೇಹ ಪತ್ತೆಯಾಗಿ, ಪೊಲೀಸರು ಪ್ರಕರಣದ ಬೆನ್ನು ಬಿದ್ದಾಗ ಪುತ್ರನೇ ತಾಯಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಪಾಪಿ ಪುತ್ರನನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಪಾರವ್ವಳ ಪತಿ ಮೃತಪಟ್ಟಿದ್ದ. ಮಗನೊಂದಿಗೆ ವಾಸವಾಗಿದ್ದ ಪಾರವ್ವ ಬೇರೊಬ್ಬ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಇದರಿಂದ ರೋಸಿ ಹೋಗಿದ್ದ ಪುತ್ರ ಆಕೆಯನ್ನು ಕರೆದುಕೊಂಡು ಬಂದು ಆಕೆಯೊಂದಿಗೆ ಸಾರಾಯಿ ಸೇವನೆ ಮಾಡಿದ್ದಾನೆ. ನಂತರ ತಾಯಿ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.