ಮುಂಬೈ: ಮಹಾಮಾರಿ ಕೊರೊನಾ ದೇಶವನ್ನು ಒಕ್ಕರಿಸಿದ ಬಳಿಕ ಅನೇಕ ಮಂದಿ ಕೊರೊನಾ ವಾರಿಯರ್ಸ್ ಗಳು ಕೆಲಸದ ಒತ್ತಡದಿಂದಾಗಿ ಹಾಗೂ ಮಕ್ಕಳಿಂದ ದೂರವಿರುವ ನಿಟ್ಟಿನಲ್ಲಿ ನೋಡಲಾಗದೆ ಕಣ್ಣೀರು ಹಾಕಿದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತೆಯೇ ಮುಂಬೈನ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇದೀಗ ತನ್ನ 17 ತಿಂಗಳ ಕಂದಮ್ಮನ ಎತ್ತಿ ಮುದ್ದಾಡಲು ಸಾಧ್ಯವಾಗದೆ ತನ್ನ ವೇದನೆಯನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಆಲಿಫ್ಯಾ ಝವೇರಿ ಎಂಬವರು ತನ್ನ ಮನಸ್ಸಿನ ದುಃಖವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ತನಗೆ ಕೊರೊನಾ ಬಂದರೂ ಪರವಾಗಿಲ್ಲ ತನ್ನ ಮಗಳಿಗೆ ಬಂದಿಲ್ಲ ಎಂಬ ಸಂತಸ ಕೂಡ ಇದ್ದು, ಧನ್ಯತಾ ಭಾವ ಹೊಂದಿದ್ದಾರೆ. ಸದ್ಯ ಝವೇರಿ ಹೋಂ ಕ್ವಾರಂಟೈನ್ ಆಗಿದ್ದು, ಮಗಳಿಂದ ದೂರವಿದ್ದಾರೆ. ವೈದ್ಯರು ಕೊರೊನಾ ಪಾಸಿಟಿವ್ ಇದೆ ಅಂದಾಗ ಗಾಬರಿಯಾಗಿ ನನ್ನ ಮಗಳಿಗೆ ಕೊರೊನಾ ಇದೆಯೋ..? ಇಲ್ಲವೋ..? ಎಂದು ಮೊದಲು ಕೇಳಿರುವುದಾಗಿ ಝವೇರಿ ತಿಳಿಸಿದ್ದಾರೆ.
ನನಗೆ ಕೊರೊನಾ ಗುಣಲಕ್ಷಣ ಕಂಡುಬಂದ ತಕ್ಷಣವೇ ನಾನು ಹೋಂಕ್ವಾರಂಟೈನ್ ಆದೆ. ಆದರೆ ಇದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ತನ್ನ ಪುಟ್ಟ ಕಂದಮ್ಮನನ್ನು ಬಿಟ್ಟಿರುವುದು ಆಗದ ಕೆಲಸ ಎಂದಿದ್ದಾರೆ. ಸದ್ಯ ನನಗೆ ಒಂದು ಬಾರಿ ನನ್ನ ಮಗಳನ್ನು ಅಪ್ಪಿಕೊಳ್ಳಬೇಕು ಎಂಬ ತನ್ನ ಮನಸ್ಸಿ ತುಡಿತವನ್ನು ಹಂಚಿಕೊಂಡಿದ್ದಾರೆ.
ಪ್ರತಿದಿನ ಬೆಡ್ ರೂಂ ಪಕ್ಕದಲ್ಲಿರುವ ಕಿಟಿಕಿಯ ಹತ್ತಿರ ಬಂದು ಆಕೆಯ ಪುಟ್ಟ ಕೈಗಳನ್ನು ಕಿಟಕಿ ಗಾಜಿನ ಮೇಲೆ ಇಡುತ್ತಾಳೆ. ಅಲ್ಲದೆ ಅಲ್ಲಿ ನನಗೋಸ್ಕರ ಆಕೆ ಕಾಯುತ್ತಿರುತ್ತಾಳೆ. ಈ ವೇಳೆ ನಾನು ಆಕೆಯನ್ನು ಎತ್ತಿ ಮುದ್ದಾಡಬೇಕು ಅನಿಸುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆಗ ತಾನೇ ಅಂಬೆಗಾಲಿಡುತ್ತಿರುವ ತನ್ನ ಪುಟ್ಟ ಕಂದಮ್ಮ ನನ್ನ ಅನುಪಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದರ ಬಗ್ಗೆಯೂ ಝವೇರಿ ಹೇಳಿಕೊಂಡಿದ್ದಾರೆ. ಆಕೆ ರಾತ್ರಿ ನಾನು ಬೇಕು ಎಂದು ಅಳುತ್ತಾಳೆ. ಆದರೆ ನನ್ನ ಪತಿ ಹಾಗೂ ನಾದಿನಿ ಅವರಿಂದ ಸಾಧ್ಯವಷ್ಟು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೂ ಆಕೆ 2 ಗಂಟೆ ಸುಮಾರಿಗೆ ಎದ್ದು ‘ಅಮ್ಮ’ ಎಂದು ಕರೆದು ಅಳುತ್ತಾಳೆ. ಆದರೆ ಆ ಸಂದರ್ಭದಲ್ಲಿ ಅಲ್ಲಿ ನಾನು ಇರುವುದಿಲ್ಲ. ಇದನ್ನು ಕೇಳಿದಾಗ ನನ್ನ ಹೃದಯವೇ ಒಡೆದುಹೋದಂತೆ ಭಾಸವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಕ್ವಾರಂಟೈನ್ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದರ ಬಗ್ಗೆ ಕೂಡ ಝವೇರಿ ತಿಳಿಸಿದ್ದಾರೆ. ಅಡುಗೆ, ಸ್ವಚ್ಛತೆ ಹಾಗೂ ಕಿಟಕಿಯ ಮೂಲಕ ತನ್ನ ಮಗಳನ್ನು ನೋಡಿಕೊಂಡು ಕ್ವಾರಂಟೈನ್ ದಿನವನ್ನು ಕಳೆಯುತ್ತಿದ್ದೇನೆ. ಅಲ್ಲದೆ ಪ್ರತಿ ದಿನ ಅವಳು ಮಲಗುವುದನ್ನೇ ನೋಡುತ್ತಿರುತ್ತೇನೆ. ಆದರೆ ನನಗೆ ಆಕೆಯನ್ನು ಮಲಗಿಸಲು ಸದ್ಯ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸದ್ಯ ಈ ಫೇಸ್‍ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರುರ ಲೈಕ್ಸ್, ಕಮೆಂಟ್ ಗಳು ಬರುತ್ತಿದೆ. ಇನ್ ಸ್ಟಾದಲ್ಲಿ 46 ಸಾವಿರ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಕೆಲ ಫೇಸ್‍ಬುಕ್ ಬಳಕೆದಾರರು, ಪುಟ್ಟ ಮಕ್ಕಳಿರುವ ಪ್ರತಿಯೊಬ್ಬ ತಾಯಿಯೂ ಇಂತಹ ಕಷ್ಟ ಅನುಭವಿಸುತ್ತಿದ್ದಾಳೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಆದಷ್ಟು ಬೇಗ ಕೊರೊನಾದಿಂದ ಗುಣಮುಖರಾಗಿ ನಿಮ್ಮ ಮಗುವನ್ನು ಎತ್ತಿ ಮುದ್ದಾಡುವಂತಾಗಲಿ ಎಂದು ಆಶೀರ್ವದಿಸಿದ್ದಾರೆ.