– ಆರೋಪಿಗಳಿಗೆ ತನ್ನ ಫೋಟೋ ಕಳುಹಿಸಿದ
– ಕೈ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ನವದೆಹಲಿ: ಉದ್ಯಮಿಯೊಬ್ಬ ತನ್ನ ಕುಟುಂಬಕ್ಕೆ ವಿಮಾ ಹಣವನ್ನು (ಇನ್ಯೂರೆನ್ಸ್) ತಲುಪಿಸಬೇಕು ಎಂಬ ಉದ್ದೇಶದಿಂದ ತಾನೇ ಅಪ್ರಾಪ್ತ ಹುಡುಗ ಸೇರಿದಂತೆ ನಾಲ್ವರಿಗೆ ಸುಪಾರಿ ಕೊಟ್ಟು, ತನ್ನನ್ನೇ ಹತ್ಯೆ ಮಾಡಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಗೌರವ್ (37) ಮೃತ ಉದ್ಯಮಿ. ಜೂನ್ 10 ರಂದು ಈ ಕೊಲೆ ನಡೆದಿದ್ದು, ತನಿಖೆ ವೇಳೆ ಮೃತ ಗೌರವ್ ಸುಪಾರಿಕೊಟ್ಟು ತನ್ನನ್ನೇ ಕೊಲೆ ಮಾಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಗೌರವ್ ಪತ್ನಿ ಶಾನು ಬನ್ಸಾಲ್ ಜೂನ್ 10 ರಂದು ನನ್ನ ಪತಿ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಗೌರವ್ ದಿನಸಿ ವ್ಯಾಪಾರಿಯಾಗಿದ್ದು, ವ್ಯಾಪಾರಕ್ಕೆ ತೆರಳಿದವರು ಮನೆಗೆ ಹಿಂದಿರುಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಂದಿನ ದಿನೇ ದೆಹಲಿಯ ಹೊರಭಾಗದಲ್ಲಿನ ರಾನ್‍ಹೌಲಾ ಪ್ರದೇಶದಲ್ಲಿ ಗೌರವ್ ಶವ ಪೊಲೀಸರಿಗೆ ಸಿಕ್ಕಿತ್ತು. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೌರವ್ ಮೃತದೇಹ ಪತ್ತೆಯಾಗಿದ್ದು, ಗೌರವ್‍ನ ಎರಡು ಕೈಗಳನ್ನು ಕಟ್ಟಲಾಗಿತ್ತು. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.
Advertisement
Advertisement
ಗೌರವ್ ಫೆಬ್ರವರಿಯಲ್ಲಿ 6 ಲಕ್ಷ ರೂ.ಗಳನ್ನು ವೈಯಕ್ತಿಕ ಸಾಲವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ರೆಡಿಟ್ ಕಾರ್ಡ್ ವಂಚನೆಯಿಂದ 3.5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರು. ಇದರಿಂದ ಗೌರವ್ ಖಿನ್ನತೆ ಒಳಗಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಹೀಗಾಗಿ ತಾನು ಮೃತಪಟ್ಟರೆ ವಿಮೆ ಹಣ ಪತ್ನಿಗೆ ಸೇರುತ್ತದೆ. ಆಕೆಯಾದರೂ ನೆಮ್ಮದಿಯಿಂದ ಇರಬಹುದು ಎಂದು ತನ್ನ ಹತ್ಯೆಗೆ ತಾನೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ ಪೊಲೀಸರು ಗೌರವ್ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಅಪ್ರಾಪ್ತ ಹುಡುಗನ ಜೊತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ. ಜೂನ್ 9 ರಂದು ಗೌರವ್ ಬಸ್ಸಿನ ಮೂಲಕ ರಾನ್‍ಹೌಲಾ ಪ್ರದೇಶಕ್ಕೆ ಹೋಗಿದ್ದಾರೆ . ಅಲ್ಲಿ ತನ್ನದೇ ಫೋಟೋವನ್ನು ಆರೋಪಿಗಳಿಗೆ ಕಳುಹಿಸಿದ್ದಾನೆ. ಆರೋಪಿಗಳಾದ ಮನೋಜ್ ಕುಮಾರ್ ಯಾದವ್, ಸೂರಜ್, ಮತ್ತು ಸುಮಿತ್ ಕುಮಾರ್ ಸೇರಿದಂತೆ ಅಪ್ರಾಪ್ತ ಹುಡುಗ ಗೌರವ್ ಇದ್ದ ಸ್ಥಳಕ್ಕೆ ಬಂದಿದ್ದಾರೆ. ನಂತರ ಆತನ ಕೈಗಳನ್ನು ಕಟ್ಟಿ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಹೇಳಿದರು.
ಪೊಲೀಸರು ಈ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಗಳಿಗೆ ಕೊಲೆ ಮಾಡಲು ಎಷ್ಟು ಹಣ ನೀಡಿದ್ದಾರೆ ಹಾಗೂ ವಿಮಾ ಹಣ ಎಷ್ಟು ಎಂದು ತನಿಖೆ ನಡೆಸುತ್ತಿದ್ದಾರೆ.