– ಮದುವೆಯಾದ 5 ತಿಂಗಳಿಗೆ ಆತ್ಮಹತ್ಯೆ
– ಹೆಚ್ಚುವರಿ ವರದಕ್ಷಿಣೆಗೆ ಕಿರುಕುಳದ ಆರೋಪ
ಹೈದರಾಬಾದ್: ಮದುವೆಯಾದ ಐದು ತಿಂಗಳಿಗೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನ ಪಿಎಸ್ ಪಾಪಿರೆಡ್ಡಿ ನಗರದಲ್ಲಿ ನಡೆದಿದೆ.
24 ವರ್ಷದ ಕೃಷ್ಣ ಪ್ರಿಯಾ ಆತ್ಮಹತ್ಯೆ ಶರಣಾದ ಯುವತಿಯಾಗಿದ್ದು, ಕಳೆದ ಜೂನ್ ತಿಂಗಳಿನಲ್ಲಿ ಜಿಮ್ ಟ್ರೈನರ್ ಆಗಿದ್ದ ಶ್ರವಣ್ ಕುಮಾರ್ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಪ್ರಿಯ ಕುಟುಂಬದವರು 5 ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು.
ಆದರೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೆಚ್ಚುವರಿಯಾಗಿ 12 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಗಂಡ ಪ್ರಿಯ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೊಂದ ಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಗಂಡನ ಮನೆಯಲ್ಲಿ ಕೃಷ್ಣ ಪ್ರಿಯಾ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಬೆಳಕಿಗೆ ಬಂದಿದ್ದು, ಆಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಮೃತಳ ಅತ್ತೆ-ಮಾವ ತಿಳಿಸಿದ್ದಾರೆ. ಆದರೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡಿದ್ದೆ ಆಕೆಯ ಸಾವಿಗೆ ಕಾರಣ ಎಂದು ಪ್ರಿಯಾ ಪೋಷಕರು ಆರೋಪಿಸಿದ್ದಾರೆ.
ಹೆಚ್ಚುವರಿ 12 ಲಕ್ಷ ರೂ. ತರುವಂತೆ ಶ್ರವಣ್ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಗರ್ಭಿಣಿಯಾಗಿದ್ದ ಕೃಷ್ಣ ಪ್ರಿಯ ಸೀಮಂತ ಕಾರ್ಯ ನಡೆಸಲು ಕೂಡ ರಾದ್ಧಾಂತ ಮಾಡಿದ್ದ. ಸೀಮಂತ ಕಾರ್ಯಕ್ರಮ ಮಾಡಬೇಕು ಎಂದರೇ ಬಂಗಾರ ತರಲೇ ಬೇಕು, ಆ ಬಳಿಕವಷ್ಟೇ ತವರು ಮನೆಗೆ ಕಳುಹಿಸುವುದಾಗಿ ಹೇಳಿದ್ದ. ಹೆಚ್ಚುವರಿ ವರದಕ್ಷಿಣೆಗಾಗಿ ಅನ್ಯಾಯವಾಗಿ ತಮ್ಮ ಮಗಳನ್ನು ಬಲಿ ಪಡೆದಿದ್ದಾರೆ ಎಂದು ಪ್ರಿಯ ಪೋಷಕರು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚರಣೆ ಕೈಗೊಂಡಿದ್ದಾರೆ.