ಬೆಂಗಳೂರು: ಬರೋಬ್ಬರಿ 4 ವರ್ಷಗಳ ಜೈಲುವಾಸದ ಬಳಿಕ ಇದೀಗ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ ಶಶಿಕಲಾ ಅವರು ಚೆನ್ನೈನತ್ತ ಹೊರಟಿದ್ದಾರೆ.
ದೇವನಹಳ್ಳಿ ರೆಸಾರ್ಟಿನಿಂದ ಚಿನ್ನಮ್ಮ ಅವರು ಚೆನ್ನೈನತ್ತ ತೆರಳಿದ್ದಾರೆ. ರೆಸಾರ್ಟಿನಿಂದ ಹೊರಡುವುದಕ್ಕೂ ಮುನ್ನ ಚಿನ್ನಮ್ಮ ಅವರು ದಿವಂಗತ ಜಯಲಲಿತಾ ಅವರ ಫೋಟೋಗೆ ಕೈಮುಗಿದು ಹೊರಟಿದ್ದಾರೆ. ದಾರಿ ಮಧ್ಯೆ ಶಶಿಕಲಾ ಅವರಿಗೆ ಬೆಂಬಲಿಗರು ಹೂಮಳೆ ಸುರಿಸಿದ್ದಾರೆ. ಅಲ್ಲದೆ ರಸ್ತೆಯುದ್ದಕ್ಕೂ ಬೆಂಬಲಿಗರು ಶಶಿಕಲಾ ಅವರಿಗೆ ಜೈಕಾರ ಹಾಕಿದ್ದು, ತಮಟೆ-ವಾದ್ಯಗಳ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ. ಚಿನ್ನಮ್ಮ ಕೂಡ ಬೆಂಬಲಿಗರಿಗೆ ಕೈ ಮುಗಿದು ಮುಂದೆ ಸಾಗಿದ್ದಾರೆ.
Advertisement
Advertisement
ಅತ್ತಿಬೆಲೆಯಲ್ಲಿ ಶಶಿಕಲಾ ಅದ್ದೂರಿ ಸ್ವಾಗತಕ್ಕೆ ಅನುಮತಿ ನಿರಾಕರಿಸಲಾಗಿದೆ. ರೆಸಾರ್ಟ್‍ನಿಂದ ನೇರವಾಗಿ ತಮಿಳುನಾಡು ಗಡಿ ತಲುಪಲಷ್ಟೇ ಅವಕಾಶ ನೀಡಲಾಗಿದೆ. ಶಶಿಕಲಾ ತಮಿಳುನಾಡು ಎಂಟ್ರಿ ಆಗ್ತಿದ್ದಂತೆ ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದೆ. ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲಿಗರು ಚೆನ್ನೈಗೆ ಕರೆದೊಯ್ಯಲಿದ್ದಾರೆ.
Advertisement
ಕರ್ನಾಟಕ ಗಡಿಯಿಂದ ಹೊಸೂರು, ಚೆನ್ನೈ ಮಾರ್ಗದಲ್ಲಿ ಮೆರವಣಿಗೆಯ ಭವ್ಯ ಸ್ವಾಗತ ಕೋರಲಾಗುತ್ತದೆ. ಸುಮಾರು 60 ಕಡೆ ಬೆಂಬಲಿಗರು ಶಶಿಕಲಾಗೆ ಸ್ವಾಗತ ಕೋರಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಶಶಿಕಲಾ ಬರಮಾಡಿಕೊಳ್ಳಲು ಸುಮಾರು 5 ಸಾವಿರ ಜನ ಸೇರುವ ಸಾಧ್ಯತೆ ಇದೆ.
Advertisement
ಚಿನ್ನಮ್ಮ ಜೈಲುವಾಸ ಅನುಭವಿಸಿದ್ದು ಏಕೆ..?
1996ರಲ್ಲಿ ಸುಬ್ರಮಣಿಯನ್ ಸ್ವಾಮಿ, ಜಯಲಲಿತಾ ಸೇರಿದಂತೆ ಆಪ್ತರಾದ ಶಶಿಕಲಾ, ಇಳವರಸಿ ಹಾಗೂ ಸುಧಾಕರ್ ಮೇಲೆ ಆಕ್ರಮ ಆಸ್ತಿ ಗಳಿಕೆ ಕೇಸ್ ಹಾಕಿದ್ದರು. ಇದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಲಾಗಿತ್ತು. 1991 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ 66 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಅನ್ನೋದು ಸಾಬೀತಾಗಿ, ನಾಲ್ವರಿಗೂ 10 ಕೋಟಿ ದಂಡ ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶೇಷ ಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಜಯಲಲಿತಾ ಪ್ರಶ್ನೆ ಮಾಡಿದ್ದರು.
ಕರ್ನಾಟಕ ಹೈ ಕೋರ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ನಾಲ್ವರನ್ನ ನಿರ್ದೋಷಿಗಳು ಎಂದು ಕರ್ನಾಟಕ ಹೈ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ಹೈ ಕೋರ್ಟ್ ತೀರ್ಪನ್ನು ರದ್ದುಗೊಳಿಸಿ, ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಲಾಗಿತ್ತು. 2016ರಲ್ಲಿ ಜಯಲಲಿತಾ ಮರಣ ಹೊಂದಿದ್ರಿಂದ ಉಳಿದ ಮೂವರು ಪರಪ್ಪನ ಅಗ್ರಹಾರ ಜೈಲು ಸೇರಬೇಕಾಯ್ತು. ಇದೀಗ ಶಶಿಕಲಾ ಮತ್ತು ಇಳವರಿಸಿ 10 ಕೋಟಿ ದಂಡ ಪಾವತಿಸಿದ್ದಾರೆ.
ಜನವರಿ 27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗಿದ್ದ ಶಶಿಕಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಜನವರಿ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಶಶಿಕಲಾ ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಇದೀಗ ಇಂದು ಶಶಿಕಲಾ ಅವರು ತವರಿಗೆ ತೆರಳಿದ್ದಾರೆ.