ಚೆನ್ನೈ: ತಮಿಳಿನ ನಟ ತಲಾ ಅಜಿತ್ ಅವರ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಬಂದಿದ್ದು, ಅಜಿತ್ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.
ಶನಿವಾರ ಸಂಜೆಯ ವೇಳೆಗೆ ಅಜಿತ್ ಅವರ ಮನೆಗೆ ಕರೆ ಮಾಡಿದ ಕಿಡಿಗೇಡಿಗಳು ನಿಮ್ಮ ಮನೆಯಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಟರ ಮನೆಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ದಿನೇ ದಿನೇ ಹೆಚ್ಚು ಹುಸಿ ಬಾಂಬ್ ಕರೆಗಳು ಬರುತ್ತಿದ್ದು, ತಮಿಳುನಾಡಿನ ಪೊಲೀಸರಿಗೆ ಹೆಚ್ಚು ತಲೆನೋವಾಗಿದೆ.
ತಮಿಳುನಾಡಿನ ಇಂಜಮ್‍ಬಕ್ಕಮ್ ನಗರದಲ್ಲಿರುವ ಅಜಿತ್ ಅವರ ಮನೆಗೆ ಕಿಡಿಗೇಡಿಗಳು ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾರೆ. ಇದನ್ನು ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಂಬ್ ನಿಷ್ಕ್ರಿಯ ದಳದವರನ್ನು ಕರೆಸಿ ಮನೆ ಪೂರ್ತಿ ತಪಾಸಣೆ ಮಾಡಿದ್ದಾರೆ. ಆದರೆ ಬಾಂಬ್ ಎಲ್ಲೂ ಪತ್ತೆಯಾಗಿಲ್ಲ. ಆಗ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ. ಈ ಹಿಂದೆ 2014 ಮತ್ತು 2017ರಲ್ಲಿ ಅಜಿತ್ ಅವರ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಬಂದಿತ್ತು.
ಇತ್ತೀಚೆಗೆ ನಟ ವಿಜಯ್ ಅವರ ಚೆನ್ನೈನ ಸಾಲಿಗ್ರಾಮ್‍ದಲ್ಲಿರುವ ಮನೆಗೂ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಬಂದಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ವಿಜಯ್ ಮನೆಗೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಹೋಗಿ ಎರಡು ಗಂಟೆಗಳ ಸತತ ಶೋಧ ನಡೆಸಿದ್ದರು. ಆದರೆ ಎಷ್ಟು ಹುಡುಕಿದರೂ ಬಾಂಬ್ ಪತ್ತೆಯಾಗಿರಲಿಲ್ಲ. ಇದಾದ ಬಳಿಕ ಇದೊಂದು ಹುಸಿಬಾಂಬ್ ಕರೆ ಎಂದು ತಿಳಿದು ಪೊಲೀಸರು ಹಿಂದಿರುಗಿದ್ದರು. ಬಳಿಕ ಈ ಕರೆಯನ್ನು ಮಾನಸಿಕ ರೋಗಿಯೊಬ್ಬ ಮಾಡಿದ್ದು ಎಂದು ಪೊಲೀಸರು ಪತ್ತೆ ಹಚ್ಚಿದ್ದರು.
ಕಳೆದ ಒಂದು ತಿಂಗಳ ಹಿಂದೆ ಟಾಲಿವುಡ್‍ನ ಸೂಪರ್ ಸ್ಟಾರ್ ರಜನಿಕಾಂತ್ ಮನೆಗೂ ಹುಸಿಬಾಂಬ್ ಕರೆಯೊಂದು ಬಂದಿತ್ತು. ಈ ಕರೆಯ ಜಾಡು ಹಿಡಿದ ಪೊಲೀಸರಿಗೆ ಎಂಟನೇ ತರಗತಿಯ ಬಾಲಕನಿಂದ ಕರೆ ಬಂದಿದೆ ಎನ್ನುವ ವಿಚಾರ ಗೊತ್ತಾಗಿತ್ತು. ಹುಸಿಬಾಂಬ್ ಕರೆಯಿಂದ ರಜಿನಿ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಈಗ ಮತ್ತೆ ಅಜಿತ್ ಅವರ ಮನೆಗೆ ಹುಸಿಬಾಂಬ್ ಕರೆ ಬಂದಿದೆ.