– ಇತ್ತ ವಸತಿ ಗೃಹ ಖಾಲಿಗೊಳಿಸುವಂತೆ ಸೂಚನೆ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರಿಯಲಿದೆ ಎಂದು ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ. ಇತ್ತ ಸರ್ಕಾರ ಸಾರಿಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಅಸ್ತ್ರಗಳನ್ನ ಪ್ರಯೋಗಿಸುತ್ತಿದೆ. ಈಗಾಗಲೇ ಖಾಸಗಿ ವಾಹನಗಳ ಚಾಲನೆಗೆ ಅನುಮತಿ ನೀಡಿದೆ. ಈ ನಡುವೆ ಸರ್ಕಾರಿ ವಸತಿ ನಿಲಯದಲ್ಲಿರೋ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಿ ಇಲ್ಲವೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ನಾಳೆಯಿಂದ ತರಬೇತಿ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಮರಳುವಂತೆ ಸೂಚನೆ ನೀಡಿದೆ.
Advertisement
ಕೊಡಗು: ಪುತ್ತೂರು ವಿಭಾಗದ ಮಡಿಕೇರಿ ಘಟಕದ ಟ್ರೈನಿ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದೆ. ನೀವು ಟ್ರೈನಿಗಳಾಗಿರುವುದರಿಂದ ಯಾವುದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಆಗಿದ್ದೀರಿ. ಹೀಗೆ ನೀವು ಕರ್ತವ್ಯಕ್ಕೆ ಗೈರಾಗಿರುವುದು ಮತ್ತು ಪ್ರತಿಭಟನೆಗೆ ಭಾಗವಹಿಸುವುದು ಅಪರಾಧವಾಗಿರುತ್ತದೆ. ಕೂಡಲೇ ನೀವು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದಾರೆ. ಮಡಿಕೇರಿ ಘಟಕ ಸುಮಾರು ಏಳರಿಂದ ಎಂಟು ಟ್ರೈನಿ ಸಿಬ್ಬಂದಿಗೆ ನೊಟೀಸ್ ನೀಡಲಾಗಿದೆ.
Advertisement
Advertisement
ನೊಟೀಸ್ ಸಿಗದವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಲಾಗಿದೆ. ನೊಟೀಸ್ ನೀಡಿದರೂ ತಕ್ಷಣವೇ ನೀವು ಕರ್ತವ್ಯಕ್ಕೆ ಹಾಜರಾಗದಿದ್ದರೆ, ಆಯ್ಕೆ ಪಟ್ಟಿಯಿಂದ ನಿಮ್ಮ ಹೆಸರನ್ನು ಕೈಬಿಡಲಾಗುವುದು ಎಂದು ಅಧಿಕಾರಿಗಳು ನೊಟೀಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
Advertisement
ಚಾಮರಾಜನಗರ: ಮುಷ್ಕರದ ನಡುವೆಯೂ ಚಾಮರಾಜನಗರ ವಿಭಾಗದಲ್ಲಿ ಆರು ಬಸ್ ಗಳು ಕಾರ್ಯಾಚರಣೆಗೆ ಇಳಿದಿವೆ. 15 ಮಂದಿ ಡ್ರೈವರ್ ಮತ್ತು ಕಂಡಕ್ಟರ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ಇದಲ್ಲದೆ ತಕ್ಷಣ ಕೆಲಸಕ್ಕೆ ಹಾಜರಾಗುವಂತೆ 241 ಮಂದಿ ತರಬೇತಿ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ. 16 ಮಂದಿ ನೌಕರರಿಗೆ ವಸತಿ ಗೃಹ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ: ಸಾರಿಗೆ ನೌಕರರ ಮುಷ್ಕರ ನಡೆಸುತ್ತಿರುವ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ನೌಕರರ ಕುಟುಂಬಗಳನ್ನು ಸಾರಿಗೆ ಇಲಾಖೆಯ ಮನೆಗಳಿಂದ ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸುತ್ತಿದ್ದಾರೆ, ಸರ್ಕಾರವೇ ಗುಂಡಾಗಿರಿ ಮಾಡುವ ಕೆಲಸ ಮಾಡುತ್ತಿದ್ದೆ ಎಂದು ಸಾರಿಗೆ ನೌಕರರ ಸಂಘದ ಧಾರವಾಡ ವಿಭಾಗ ಗೌರವಾಧ್ಯಕ್ಷ ಪಿ.ಎಚ್. ನಿರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಪೊಲೀಸರು ಮತ್ತು ಅಧಿಕಾರಿಗಳು ಬಂದು ನೌಕರರನ್ನು ಕರೆದುಕೊಂಡು ಹೋಗುತ್ತಿದ್ದಾರೆ, ಹೆಣ್ಣುಮಕ್ಕಳನ್ನೆಲ್ಲ ಹೊರಗೆ ಹಾಕಿ ಮನೆಗಳಿಗೆ ಬೀಗ ಹಾಕುತ್ತಿದ್ದಾರೆ, ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದು ಮಾಡಿ ಎಂದು ಕಿಡಿಕಾರಿದರು. ಇಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಇದನ್ನು ನಿಲ್ಲಿಸಬೇಕು ಎಂದ ಅವರು, ಹುಬ್ಬಳ್ಳಿಯಲ್ಲಿ ಸಾರಿಗೆ ನೌಕರರ ಕುಟುಂಬಗಳ ಮೇಲೆ ದೌರ್ಜನ್ಯ ಮಾಡುತಿದ್ದು, ಇದನ್ನೆಲ್ಲ ತಡೆಯಬೇಕು. ನೌಕರರ ಮನೆಯವರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು. ಪೊಲೀಸರನ್ನು ಬಳಸಿ ದಮನಕಾರಿಯಾಗಿ ಬೆದರಿಕೆ ಹಾಕೋದು ಸರಿಯಲ್ಲ ಎಂದ ಅವರು, ಸಿಎಂ ಇದನ್ನ ಗಮನಿಸಬೇಕು ಎಂದರು.