– ಬಾಲಕಿ ತರಕಾರಿ ಮಾರುತ್ತಿರೋ ಫೋಟೋ ವೈರಲ್
ದಿಸ್ಪುರ್(ಅಸ್ಸಾಂ): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಅನೇಕ ಮಂದಿ ಪಡಬಾರದ ಕಷ್ಟ ಅನುಭವಿಸಿದರು. ಹೀಗೆ ಅಗತ್ಯ ವಸ್ತುಗಳಿಗೆ ಕಷ್ಟ ಪಡುವವರಿಗೆ ಅಸ್ಸಾಂ ಪೊಲೀಸ್ ಸಹಾಯ ಹಸ್ತ ಚಾಚುತ್ತಿದ್ದಾರೆ.
ತರಕಾರಿ ಮಾರುತ್ತಿದ್ದ ಬಾಲಕಿಯೊಬ್ಬಳಿಗೆ ಅಸ್ಸಾಂನ ದಿಬ್ರುಗರ್ ಪೊಲೀಸ್ ಸೋಮವಾರ ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿ, ಮಾನವೀಯತೆ ಮೆರೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬಾಲಕಿ ತನ್ನ ಕುಟುಂಬವನ್ನು ನಿರ್ವಹಿಸಲೆಂದು ತರಕಾರಿ ಮಾರಾಟ ಮಾಡುತ್ತಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಪೊಲೀಸರು ಆಕೆಯ ಸಹಾಯಕ್ಕೆ ನಿಂತಿದ್ದಾರೆ.
Advertisement
Advertisement
ದಿಬ್ರುಗರ್ ಜಿಲ್ಲೆ ಜನ್ಮೋನಿ ಗೊಗೊಯ್, ಕಳೆದ 8 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ತಂದೆ ಸೇರಿದಂತೆ ತನ್ನ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಳು. ಹೀಗಾಗಿ ಲಾಕ್ ಡೌನ್ ಸಂದರ್ಭದಲ್ಲಿ ಬೈಸಿಕಲ್ ಮೂಲಕ ಮನೆ-ಮನೆಗೆ ತರಕಾರಿ ಮಾರಾಟ ಮಾಡುತ್ತಿದ್ದಳು.
Advertisement
ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವ ಈಕೆಗೆ ತನ್ನ ಗೆಳತಿಯರಂತೆ ಉನ್ನತ ಶಿಕ್ಷಣ ಪಡೆಯುವ ಹಂಬಲವಿತ್ತು. ಆದರೆ ಇಡೀ ದೇಶ ಲಾಕ್ ಡೌನ್ ಆದ ಪರಿಣಾಮ ಈಕೆ ಕುಟುಂಬ ನಿರ್ವಹಣೆ ಮಾಡಲೆಂದು ತರಕಾರಿ ಮಾರಾಟ ಮಾಡುವತ್ತ ಚಿತ್ತ ಹರಿಸಿದಳು. ಹೀಗೆ ತರಕಾರಿ ಮಾರುತ್ತಿದ್ದಾಗ ಯಾರೋ ಈಕೆಯ ಫೋಟೋ ತೆಗೆದಿದ್ದಾರೆ. ಅಲ್ಲದೆ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.
Advertisement
ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸೋಮವಾರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಪಲ್ಲವಿ ಮಜೂಮ್ದಾರ್ ಬಾಲಕಿಯ ಮನೆಗೆ ಬೇಟಿ ನೀಡಿದರು. ಅಲ್ಲದೆ ಆಕೆಗೆ ಮೊಪೆಡ್ ಉಡುಗೊರೆಯಾಗಿ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮಹಿಳಾ ಪೊಲೀಸ್ ಅಧಿಕಾರಿ, ಕುಟುಂಬ ನಿರ್ವಹಣೆಗಾಗಿ ತರಕಾರಿ ಮಾರುತ್ತಿದ್ದ ಬಾಲಕಿಗೆ ಡಿಜಿಪಿ ನಿರ್ದೇಶನದಂತೆ ಆಕೆಗೆ ಆರ್ಥಿಕ ಸಹಾಯ ಕೂಡ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಡಿವೈಎಸ್‍ಪಿ ಬೈಕ್ ಒಂದನ್ನು ಗಿಫ್ಟ್ ಆಗಿ ನೀಡಿರುವುದಾಗಿ ತಿಳಿಸಿದರು.
Janmoni Gogo sells vegetables on a bicylcle to fend for her family. Inspired by her self respect & guided by our visionary @DGPAssamPolice Sir's direction to transform ourselves from police force to facilitators of economy, DYSP HQ gifted the little entrepreneur a moped / bike pic.twitter.com/kncyhRQEr9
— Dibrugarh Police (@dibrugarhpolice) May 11, 2020