– ರಾಜಕಾರಣಿ ವಿಜಯಕಾಂತ್‍ಗೂ ಬೆದರಿಕೆ
ಚೆನ್ನೈ: ತಮಿಳು ಸ್ಟಾರ್ ನಟ ಧನುಷ್ ಹಾಗೂ ಹಿರಿಯ ನಟ, ರಾಜಕಾರಣಿ ವಿಜಯಕಾಂತ್ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಬಾಂಬ್ ಬೆದರಿಕೆ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಕೂಡಲೇ ಇಬ್ಬರ ಮನೆಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಏನೂ ಸಿಗಲಿಲ್ಲ. ಹೀಗಾಗಿ ಇದೊಂದು ಸುಳ್ಳು ಬೆದರಿಕೆ ಎಂದು ತಿಳಿಸಿದ್ದಾರೆ.
ಚೆನ್ನೈನ ಧನುಷ್ ಅವರ ಅಭಿರಾಮಪುರಂ ನಿವಾಸ ಹಾಗೂ ವಿಜಯಕಾಂತ್ ಅವರ ವಿರುಗಂಬಕ್ಕಂನ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಎರಡು ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು, ಇಬ್ಬರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಕರೆ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಈ ಎರಡೂ ಕರೆಗಳನ್ನು ಒಬ್ಬನೇ ಮಾಡಿರುವುದಾಗಿ ಪೊಲೀಸರು ತಿಳಿದುಕೊಂಡರು. ಘಟನೆಯ ಬಳಿಕ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಕಾಲಿವುಡ್ ನಟರಿಗೆ ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿದೆ. ಈ ಮೊದಲು ರಜನಿಕಾಂತ್, ವಿಜಯ್ ಮತ್ತು ಸೂರ್ಯ ಅವರಿಗೆ ನಕಲಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಈ ಕರೆಗಳನ್ನು ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಜುಲೈ 18ರಂದು ನಟ ಅಜಿತ್ ಅವರ ಮನೆಯಲ್ಲಿ ಬಾಂಬ್ ಇರುವ ಬಗ್ಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು. ಕೂಡಲೇ ಪೊಲೀಸರು ಅವರ ಮನೆಗೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿದರು. ಬಾಂಬ್ ಸ್ಕ್ವಾಡ್ ಅದೀಕಾರಿಗಳು ಇಡೀ ಮನೆಯನ್ನೇ ಜಾಲಾಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಇದು ಸುಳ್ಳು ಕರೆ ಎಂದರು.
ಈ ಎಲ್ಲಾ ಪ್ರಕರಣಗಳು ಮಾಸುವ ಮುನ್ನವೇ ಇದೀಗ ಧನುಷ್ ಹಾಗೂ ವಿಜಯಕಾಂತ್ ಮನೆಗಳಿಗೆ ಬೆದರಿಕೆ ಕರೆ ಬಂದಿದೆ. ಆದರೆ ಈ ಕರೆಗಳನ್ನು ಓರ್ವ ವ್ಯಕ್ತಿಯೇ ಮಾಡಿದ್ದಾನೋ ಇಲ್ಲವೋ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.