– ಕೊರೊನಾ ಬಂದಮೇಲೆ ಏನು ಮಾಡಬೇಕು?
ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಸಹ ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ಕುರಿತು ನಟಿ ಅನು ಪ್ರಭಾಕರ್ ಮುಖರ್ಜಿ ಜಾಗೃತಿ ಮೂಡಿಸಿದ್ದು, ತಮಗೆ ಪಾಸಿಟಿವ್ ಬಂದರೂ ಮನೆಯವರಿಗೆ ಹೇಗೆ ನೆಗೆಟಿವ್ ಬಂತು, ಕೊರೊನಾ ಸೋಂಕು ತಗುಲಿದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿದ್ದಾರೆ.
ಫೇಸ್ಬುಕ್‍ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ನನಗೆ ಪಾಸಿಟಿವ್ ಬಂದು ಮನೆಯವರಿಗೆ ಎಲ್ಲರಿಗೂ ನೆಗೆಟಿವ್ ಬರಲು ಕಾರಣ ನನಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇರಲಿಲ್ಲ. ಜ್ವರ, ನೆಗಡಿ, ಕೆಮ್ಮು ಏನೂ ಬಂದಿಲ್ಲ. ಆದರೆ ಕಳೆದ ವಾರ ನನಗೆ ಟೇಸ್ಟ್ ಹಾಗೂ ಸ್ಮೆಲ್ ಹೋಗಲು ಶುರುವಾಯಿತು ಎಂದು ತಿಳಿಸಿದ್ದಾರೆ.
ಕೂಡಲೇ ವೈದ್ಯೆ ನನ್ನ ಅಕ್ಕ ಶೀಲಾ ಧೀಕ್ಷಿತ್‍ಗೆ ಕರೆ ಮಾಡಿ, ಈ ರೀತಿಯಾಗುತ್ತಿದೆ ಎಂದು ವಿವರಿಸಿದೆ. ಆಗ ಅವರು ತಕ್ಷಣವೇ ಟೆಸ್ಟ್ ಮಾಡಿಸಿಕೊ, ಐಸೋಲೇಟ್ ಆಗು, ರಿಸಲ್ಟ್ ಬರುವವರೆಗೆ ಕಾಯಬೇಡ, ಐಸೋಲೇಟ್ ಆಗಿ ಪ್ರತ್ಯೇಕವಾಗಿರು, ಯಾವುದೇ ಕಾರಣಕ್ಕೂ ಕುಟುಂಬದವರೊಂದಿಗೆ ಸೇರಬೇಡ ಎಂದು ಹೇಳಿದರು. ಹಾಗೇ ನಾನು ಸ್ಟ್ರಿಕ್ಟ್ ಆಗಿ ಫಾಲೋ ಮಾಡಿದೆ, ಹೀಗಾಗಿ ನನ್ನ ಕುಟುಂಬದವರಿಗೆ ಪಾಸಿಟಿವ್ ಬರದಿರಲು ಇದೂ ಒಂದು ಕಾರಣ ಇರಬಹುದು ಎಂದು ವಿವರಿಸಿದರು.
ಸಣ್ಣ ಲಕ್ಷಣ ಕಾಣಿಸಿಕೊಂಡರೂ ತಕ್ಷಣವೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ, ಹಾಗೇ ಐಸೋಲೇಟ್ ಆಗಿ. ಐಸೋಲೇಟ್ ಆಗಲು ಮನೆಯಲ್ಲಿ ಅವಕಾಶ ಇಲ್ಲವಾದಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ತೆರಳಿ. ಟೆಸ್ಟ್ ರಿಸಲ್ಟ್ ಬಂದಮೇಲೆ ಚಿಕಿತ್ಸೆ ಪಡೆದರಾಯಿತು ಎಂದು ಯಾವುದೇ ಕಾರಣಕ್ಕೂ ಕಾಯಬೇಡಿ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ನಿಮಗೆ ಲಕ್ಷಣ ಏನಿದೆಯೋ ಅದಕ್ಕೆ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ಆರಂಭದ 4-5 ದಿನಗಳೇ ತುಂಬಾ ಮುಖ್ಯವಾಗುತ್ತದೆ. ಪಲ್ಸ್ ರೇಟ್, ಆಕ್ಸಿಜನ್ ಲೆವೆಲ್, ಬಿಪಿ ಚೆಕ್ ಮಾಡಲು ವೈದ್ಯರ ಅವಶ್ಯಕತೆ ಇರುತ್ತದೆ. ಹೀಗಾಗಿ ತಕ್ಷಣವೇ ನಿಮಗಿರುವ ಲಕ್ಷಣಗಳಿಗೆ ಚಿಕಿತ್ಸೆ ಪಡೆಯಲು ಆರಂಭಿಸಿ, ಟೆಸ್ಟ್ ರಿಸಲ್ಟ್‍ಗಾಗಿ ಕಾಯಬೇಡಿ. ಸರ್ಕಾರ ತನ್ನ ಮಿತಿ ಮೀರಿ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿ ಗಂಭೀರವಾಗಿ ಆಕ್ಸಿಜನ್ ಬೇಕು, ಆಸ್ಪತ್ರೆ ಬೇಕು ಎಂದರೆ ತುಂಬಾ ಕಷ್ಟವಾಗುತ್ತದೆ ಎಂದು ತಿಳಿಸಿದರು.