ತಬ್ಲಿಘಿಗಳ ಸಂಪರ್ಕದಿಂದ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಸಾವು – ಕೋಟೆನಾಡಿನ ಜನರಲ್ಲಿ ಹೆಚ್ಚಿದ ಆತಂಕ

Public TV
1 Min Read
ctd corona

ಚಿತ್ರದುರ್ಗ: ಗುಜರಾತ್‍ನಿಂದ ಆಗಮಿಸಿದ್ದ ತಬ್ಲಿಘಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 55 ವರ್ಷದ ವ್ಯಕ್ತಿ ಚಿತ್ರದುರ್ಗದಲ್ಲಿ ಸಾವನ್ನಪ್ಪಿದ್ದಾರೆ.

ಮೇ 5ರಂದು ಗುಜರಾತ್‍ನ ಅಹಮದಾಬಾದ್‍ನಿಂದ ಚಿತ್ರದುರ್ಗಕ್ಕೆ ಬಂದಿದ್ದ 15 ಜನ ತಬ್ಲಿಘಿಗಳಲ್ಲಿ 6 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಸೋಂಕಿತರಿಗೆ ಊಟ ನೀಡಲು ಮೃತ ವ್ಯಕ್ತಿ ಬರುತ್ತಿದ್ದರು. ಈ ಹಿನ್ನೆಲೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರೆಂದು ಪರಿಗಣಿಸಿ ಅವರನ್ನು ನಗರದ ಹಾಸ್ಟೆಲ್‍ನಲ್ಲಿ ಕಳೆದ 8 ದಿನಗಳಿಂದ ಕ್ವಾರಂಟೈನ್ ಮಾಡಲಾಗಿತ್ತು.

vlcsnap 2020 05 17 09h51m42s052 1

ಹಲವು ದಿನಗಳಿಂದ ಎದೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಈ 55 ವರ್ಷದ ವ್ಯಕ್ತಿಗೆ ಕ್ವಾರಂಟೈನ್‍ನಲ್ಲಿರುವಾಗ ಅಗತ್ಯ ಚಿಕಿತ್ಸೆ ಸಿಕ್ಕಿರಲಿಲ್ಲ. ಅಲ್ಲದೇ ಶನಿವಾರ ರಾತ್ರಿ ಸಹ ಎದೆ ನೋವು ಕಾಣಿಸಿಕೊಂಡಿದ್ದು, ಬೆಳಗಿನ ಜಾವ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಟಿಹೆಚ್‍ಓ ತುಳಸಿ ರಂಗನಾಥ್ ಅವರು, ಇಂದು ಸಾವನ್ನಪ್ಪಿರುವ ವ್ಯಕ್ತಿಗೆ ಕೊರೊನಾ ಸೋಂಕು ಇರಲಿಲ್ಲ. ಅವರ ವರದಿ ಸಹ ನೆಗೆಟಿವ್ ಬಂದಿದ್ದು, 14 ದಿನಗಳ ಕ್ವಾರಂಟೈನ್ ಮುಗಿಸುವ ಉದ್ದೇಶದಿಂದ ಹಾಸ್ಟೆಲ್ ನಲ್ಲಿದ್ದರು. ಅವರಿಗೆ ಡಯಾಬಿಟಿಸ್, ಬಿಪಿ ಸಹ ಇತ್ತು. ಶನಿವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

vlcsnap 2020 05 17 09h51m31s485

ಅವರಿಗೆ ಕೊರೊನಾ ಲಕ್ಷಣಗಳು ಇಲ್ಲದ ಹಿನ್ನೆಲೆಯಲ್ಲಿ ಈಗಾಗಲೇ ಅವರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಂತರಿಸಲಾಗಿದೆ. ಅವರ ಸಂಪ್ರದಾಯ, ವಿಧಿ ವಿಧಾನಗಳ ಪ್ರಕಾರ ಮೃತರ ಅಂತ್ಯಸಂಸ್ಕಾರ ನೆರವೇರಲಿದೆ. ಒಂದು ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿದ್ದರೆ ಆರೋಗ್ಯ ಇಲಾಖೆ ತಂಡವೇ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸುತ್ತಿತ್ತು ಎಂದು ಟಿಹೆಚ್‍ಓ ಸ್ಪಷ್ಟಪಡಿಸಿದ್ದಾರೆ.

ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿತ್ರದುರ್ಗ ನಗರದ ಖಾಸಗಿ ಅಂಗಡಿಯ ಮಾಲಿಕರೆಂದು ಗುರುತಿಸಲಾಗಿದ್ದು, ಜೆಸಿಆರ್ ಬಡಾವಣೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ತಬ್ಲಿಘಿಗಳ ಪ್ರಾಥಾಮಿಕ ಸಂಪರ್ಕದಲ್ಲಿದ್ದ ವ್ಯಕ್ತಿ ಸಾವಿನಿಂದಾಗಿ ಚಿತ್ರದುರ್ಗದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು, ಲಾಕ್‍ಡೌನ್ ಸಡಿಲಿಕೆಯೇ ಬೇಡವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *