ಗದಗ: ಜಿಲ್ಲೆಗೆ ಮತ್ತೆ ಕೊರೊನಾ ವೈರಸ್ ವಕ್ಕರಿಸಿದ್ದು, ಮೊನ್ನೆಯಷ್ಟೇ ಮೂವರಿಗೆ ಕೊರೊನಾ ದೃಢವಾಗಿತ್ತು. ಈಗ ಮತ್ತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಮೇ 12ರ ರಾತ್ರಿ ವೇಳೆ ಗುಜರಾತ್‍ನ ಅಹಮದಾಬಾದ್‍ನಿಂದ ಗದಗ ನಗರಕ್ಕೆ 9 ಜನ ತಬ್ಲಿಘಿಗಳು ಬಂದಿದ್ದರು. ಈ 9 ಮಂದಿ ಪೈಕಿ 4 ಜನರಿಗೆ ಇಂದು ಸೋಂಕು ದೃಢಪಟ್ಟಿದೆ. ಈ ನಾಲ್ವರು ನಗರದ ಬೆಟಗೇರಿ ನಿವಾಸಿಗಳು ಎನ್ನಲಾಗುತ್ತಿದೆ.
ಗದಗಕ್ಕೆ ಬಂದ ಕೂಡಲೆ ಇವರನ್ನು ಕನಗಿನಹಾಳ ರಸ್ತೆ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ 62 ವರ್ಷದ ರೋಗಿ-970 ನಗರದ ಬೆಟಗೇರಿ ಕಬಾಡಿ ರಸ್ತೆ ನಿವಾಸಿ, 47 ವರ್ಷದ ರೋಗಿ-971 ಬೆಟಗೇರಿ ಗಾಂಧಿ ನಗರ(ಸೆಟಲ್ಮೆಂಟ್) ನಿವಾಸಿ, 44 ವರ್ಷದ ರೋಗಿ-972 ಬೆಟಗೇರಿ ತೆಗ್ಗಿನಪೇಟೆ ನಿವಾಸಿ, 28 ವರ್ಷದ ಯುವಕ ರೋಗಿ-973 ಬೆಟಗೇರಿ ಮಂಜುನಾಥ ನಗರ(ಕಣವಿ ಪ್ಲಾಟ್) ನಿವಾಸಿಗಳೆಂದು ಗುರುತಿಸಲಾಗಿದೆ.
ಇವರು ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿದ್ದ ತಬ್ಲಿಘಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ನಾಲ್ವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 7 ಜನರು ಗದಗ ಜಿಮ್ಸ್ ಆಸ್ಪತ್ರೆಯ ಕೊರೊನಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಬ್ಲಿಘಿಗಳ ನಂಟು ಇದೀಗ ಗದಗ ಜಿಲ್ಲೆಗೆ ಕಂಠಕವಾಗಿದ್ದು, ಜನರಲ್ಲಿ ಮತ್ತಷ್ಟು ಆಂತಕವನ್ನು ಹೆಚ್ಚಿಸಿದೆ.