ಬೀದರ್: ಜೀವನದಲ್ಲೇ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ ಹೀಗಾಗಿ ನನ್ನನ್ನು ನೀವೆಲ್ಲರೂ ಕ್ಷಮಿಸಿ ಎಂದು ಹೇಳಿ ವಾಟ್ಸಾಪ್ ಮೂಲಕ ಪಾಲಕರಿಗೆ ಸಂದೇಶ ರವಾನಿಸಿ ಯುವಕನೊಬ್ಬ ಕೆರೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ.
ಅವಿನಾಶ್ ರಾಜಕುಮಾರ್ ಪಾಟೀಲ್(22 ) ಮೃತನಾಗಿದ್ದಾನೆ. ಈತ ಭಾಲ್ಕಿ ತಾಲೂಕಿನ ಕಾಸರತೂಗಾಂವ ಗ್ರಾಮದ ನಿವಾಸಿಯಾಗಿದ್ದನು. ನಾನು ಒಂದು ತಪ್ಪನ್ನು ಮಾಡಿದ್ದೇನೆ ಎಂದು ಪೋಷಕರಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ
ಕಳೆದ ಆಗಸ್ಟ್ 4ರಂದು ಬಸವಕಲ್ಯಾಣ ನಗರದಲ್ಲಿ ನನ್ನ ಸ್ನೇಹಿತರ ಮದುವೆ ಇದೆ ಎಂದು ಹೇಳಿ ಮನೆಯಿಂದ ಹೊರಟಿರುವ ಈತ, ಬಸವಕಲ್ಯಾಣ ನಗರದ ಲಾಡ್ಜ್‍ವೊಂದರಲ್ಲಿ 3ದಿನಗಳ ಕಾಲ ಉಳಿದು ಆಗಸ್ಟ್ 7ರಂದು ಲಾಡ್ಜ್ ನಿಂದ ನಾಪತ್ತೆಯಾಗಿದ್ದನು. ಅಂದು ಮನೆಯವರಿಗೆ ವಾಟ್ಸಾಪ್ ಮೂಲಕ ನಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳೆ ಸಂದೇಶ ರವಾನಿಸಿ ಅದೇ ದಿವಸ ನಗರಕ್ಕೆ ಹೊಂದಿಕೊಂಡಿರುವ ತ್ರಿಪುರಾಂತ ಕೆರೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ನಾಪತ್ತೆಯಾಗಿರುವ ಯುವಕನ ಪತ್ತೆಗಾಗಿ ಹುಡುಕಾಟ ನಡೆಸುತ್ತಿತ್ತು. ಈ ನಡುವೆ ತ್ರಿಪುರಾಂತ ಕೆರೆಯಲ್ಲಿ ಇಂದು ಯುವಕನ ಶವ ಪತ್ತೆಯಾಗಿದೆ. ಸುದ್ದಿ ತಿಳಿದ ಬಸವಕಲ್ಯಾಣ ನಗರ ಪಿಎಸ್ ಐ ಅಮರ್ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.