– ವಿಫಲವಾಯ್ತು ಹೆಂಡ್ತಿಯ ಅವಿರತ ಪ್ರಯತ್ನ
ಲಕ್ನೋ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಈ ಮಧ್ಯೆ ಹಲವಾರು ಮನಕಲಕುವ ದೃಶ್ಯಗಳು ನಡೆದು ಹೋಗಿವೆ, ಇನ್ನೂ ನಡೆಯುತ್ತಲೇ ಇವೆ. ಸದ್ಯ ಪತಿ ಹಾಗೂ ಪತ್ನಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಫೋಟೋ ನೋಡಿ ಮೂಕವಿಸ್ಮಿತರಾಗಿದ್ದಾರೆ.
ಹೌದು. ಮಹಿಳೆಯೊಬ್ಬರು ಆಟೋದಲ್ಲಿ ಕುಳಿತುಕೊಂಡು ತನ್ನ ಪತ್ನಿಯನ್ನು ಕೊರೊನಾದಿಂದ ಬಚಾವ್ ಮಾಡಲು ಅವಿರತ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಮಹಿಳೆಯನ್ನು ರೇಣು ಸಿಂಘಾಲ್ ಎಂದು ಗುರುತಿಸಲಾಗಿದೆ.
ರೇಣು ಅವರು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಪತಿ ರವಿ ಸಿಂಘಾಲ್ ಬಾಯಿಗೆ ತನ್ನ ಬಾಯಿಯಿಟ್ಟು ಉಸಿರು ನೀಡುವ ಮೂಲಕ ಹೃದಯ ಮತ್ತು ಶ್ವಾಸಕೋಶ ಪ್ರಚೋದಿಸಲು ಯತ್ನಿಸಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಈ ಫೋಟೋ ವೈರಲ್ ಆಗಿದೆ.
ದುರ್ದೈವ ಅಂದರೆ ಮಹಿಳೆಯ ಪ್ರಯತ್ನ ವಿಫಲವಾಗಿದೆ. ಪತಿ ಆಟೋದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಂತರ ಆಗ್ರಾದ ಎಸ್‍ಎನ್ ಮೆಡಿಕಲ್ ಆಸ್ಪತ್ರೆಯಲ್ಲೂ ರವಿ ನಿಧನರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ಮಹಾಮಾರಿಯಿಂದಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೆಡೆ ಆಸ್ಪತ್ರೆಯಲ್ಲಿ ಬೆಡ್ ಗಾಗಿ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ಆಕ್ಸಿಜನ್ ಸಿಗದೆ ಜನ ನರಳಾಡುತ್ತಿದ್ದಾರೆ.