ತನ್ನ ಕೋಚ್ ಮಗಳನ್ನೇ ವರಿಸಿದ ರೈನಾ- ಪವರ್ ಹಿಟ್ಟರ್ ಪ್ರೇಮ್ ಕಹಾನಿ

Public TV
2 Min Read
suresh raina 1

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪವರ್ ಹಿಟ್ಟರ್ ಸುರೇಶ್ ರೈನಾ ಅವರು ತನ್ನ ಬಾಲ್ಯದ ಕೋಚ್ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.

ಕ್ರಿಕೆಟ್ ಎಂಬ ಜಂಟಲ್‍ಮ್ಯಾನ್ ಕ್ರೀಡೆಗೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಸುರೇಶ್ ರೈನಾ ಅವರದ್ದು, ಮೈದಾನದಲ್ಲಿ ಶಾಂತವಾಗಿ ವರ್ತಿಸುವ ಅವರು ತನ್ನ ಬ್ಯಾಟ್ ಮೂಲಕವೇ ಕೆಣಕಿದವರಿಗೆ ಉತ್ತರ ಹೇಳುತ್ತಾರೆ. ಹಾಗೆಯೇ ಅವರು 2015ರಲ್ಲಿ ತನ್ನ ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿಯವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

sureshraina

ಸುರೇಶ್ ರೈನಾ ಮತ್ತು ಪ್ರಿಯಾಂಕ ಭಾರತ ಕ್ರಿಕೆಟ್ ತಂಡದಲ್ಲಿರುವ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಇವರು ಬಹುಕಾಲದಿಂದ ಪ್ರೀತಿಸಿ ಮದುವೆಯಾಗಿದ್ದರು. ಇನ್ನೊಂದು ವಿಶೇಷವೆಂದರೆ ರೈನಾ ಅವರು ತನ್ನ ಬಾಲ್ಯದ ಕ್ರಿಕೆಟ್ ಕೋಚ್ ಮಗಳನ್ನೇ ವಿವಾಹವಾಗಿದ್ದಾರೆ. ಕ್ರಿಕೆಟ್ ಆಡುವ ಕನಸನ್ನು ಕಂಡಿದ್ದ ಸುರೇಶ್ ರೈನಾ, ತನ್ನ ಬಾಲ್ಯದಲ್ಲಿ ಕೋಚ್ ತೇಜ್‍ಪಾಲ್ ಚೌಧರಿಯವರ ಬಳಿ ಹೋಗಿದ್ದರು. ಈ ಕೋಚ್ ತೇಜ್‍ಪಾಲ್ ಅವರ ಮಗಳೇ ರೈನಾ ಅವರ ಪತ್ನಿ ಪ್ರಿಯಾಂಕ.

suresh raina 3

ಮೊದಲಿಗೆ ತೇಜ್‍ಪಾಲ್ ಚೌಧರಿಯವರ ಜೊತೆ ಕ್ರಿಕೆಟ್ ಕಲಿಯುತ್ತಿದ್ದರು ರೈನಾ, ಪ್ರಿಯಾಂಕ ಅವರನ್ನು ನೋಡಿರಲಿಲ್ಲ. ಆದರೆ ನಂತರ ತೇಜ್‍ಪಾಲ್ ಅವರು ರೈನಾ ಅವರನ್ನು ಕುಟುಂಬದ ಕಾರ್ಯಕ್ರಮವೊಂದಕ್ಕೆ ಕರೆದಿದ್ದರಂತೆ. ಈ ಕಾರ್ಯಕ್ರಮಕ್ಕೆ ಹೋಗಿದ್ದ ರೈನಾ ಅಲ್ಲಿ ಪ್ರಿಯಾಂಕ ಅವರನ್ನು ನೋಡಿ ಇಷ್ಟಪಟ್ಟಿದ್ದಾರೆ. ನಂತರ ಪರಿಚಯವಾಗಿದೆ. ಪರಿಚಯ ಪ್ರೀತಿ ಆಗಿ ಡೇಟಿಂಗ್ ಮಾಡಿ ನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

suresh raina 5

ಬಾಲ್ಯದಿಂದಲೂ ಚೆನ್ನಾಗಿ ಓದುತ್ತಿದ್ದ ಪ್ರಿಯಾಂಕ ಅವರು, ಉತ್ತರ ಪ್ರದೇಶದ ಒಂದು ಉನ್ನತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ ಹಾಗೂ ಅವರು ನೆದರ್ ಲ್ಯಾಂಡ್‍ನಲ್ಲಿ ಬ್ಯಾಂಕ್‍ವೊಂದರಲ್ಲಿ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಮದುವೆಯಾದ ನಂತರ ಅಲ್ಲಿಂದ ವಾಪಸ್ ಬಂದು ಇಲ್ಲಿ ಒಂದು ರೆಡಿಯೋ ಚಾನೆಲ್ ನಡೆಸುತ್ತಿದ್ದಾರೆ. ಜೊತೆಗೆ ಹಳ್ಳಿಗಾಡಿನ ಹೆಣ್ಣು ಮಕ್ಕಳ ದನಿಯಾಗಿದ್ದಾರೆ. ಅವರಿಗೆ ವಿದ್ಯಾಭ್ಯಾಸ, ಉಚಿತ ಆರೋಗ್ಯ ತಪಾಸಣೆ ಮಾಡಿಸುತ್ತಾರೆ.

suresh raina 4

2015 ಏಪ್ರಿಲ್ 3ರಂದು ಪ್ರಿಯಾಂಕ ಮತ್ತು ರೈನಾ ದೆಹಲಿಯಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಈಗ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಮೊದಲ ಹೆಣ್ಣು ಮಗು 2016ರಲ್ಲಿ ಜನಿಸಿತ್ತು. ಈ ಮಗುವೆಗೆ ಗ್ರೇಸಿಯಾ ರೈನಾ ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ಈಗ ಇದೇ ವರ್ಷ ಮಾರ್ಚ್ 23ರಂದು ಎರಡನೇ ಮಗುವಿಗೆ ತಂದೆಯಾದ ರೈನಾಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ರಿಯೋ ರೈನಾ ಎಂದು ಹೆಸರಿಡಲಾಗಿದೆ.

https://www.instagram.com/p/By2G5egBuXJ/

ಸದ್ಯ ಟೀಂ ಇಂಡಿಯಾದಿಂದ ಕೊಂಚ ದೂರ ಉಳಿದಿರುವ ಸುರೇಶ್ ರೈನಾ, ಕೊನೆಯದಾಗಿ ಭಾರತ ಪರವಾಗಿ ಆಡಿದ್ದು 2018ರಲ್ಲಿ ಇದಾದ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ರೈನಾ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ರೈನಾ ಈ ಬಾರಿ ಆಡಲು ಭಾರೀ ಸಿದ್ಧತೆ ನಡೆಸಿದ್ದರು. ಈ ಹಿನ್ನೆಯಲ್ಲಿ ರೈನಾ ಧೋನಿ ಜೊತೆಗೂಡಿ ಅಭ್ಯಾಸ ಕೂಡ ನಡೆಸಿದ್ದರು. ಆದರೆ ಕೊರೊನಾ ಲಾಕ್‍ಡೌನ್ ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *