– ಯುವಕನ ಜೊತೆ ಆತನ ಗೆಳೆಯರು ಅಂದರ್
ಜೈಪುರ: ತನ್ನದೇ ಅಪಹರಣಕ್ಕೆ ವ್ಯೂಹ ರಚಿಸಿದ್ದ ಯುವಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತನ್ನ ಕಿಡ್ನ್ಯಾಪ್ ಗೆ ಗೆಳೆಯರ ಸಹಾಯ ಪಡೆದು ತಂದೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.
ವಿಕಾಸ್ ತನ್ನ ಕಿಡ್ನ್ಯಾಪ್ ಗೆ ಪ್ಲಾನ್ ಮಾಡಿದ್ದ ಯುವಕ. ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಕೇಕಡಾ ಗ್ರಾಮದ ನಿವಾಸಿಯಾಗಿದ್ದ ವಿಕಾಸ್ ಕ್ರೆಡಿಟ್ ಕಾರ್ಡ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದನು. ಹಣಕ್ಕಾಗಿ ತನ್ನ ಅಪಹರಣ ಮಾಡುವಂತೆ ಗೆಳೆಯರಾದ ಯಾದರಾಮ್ ಮತ್ತು ಲೋಕೇಂದ್ರ ಸಿಂಗ್ ಗೆ ಸೂಚಿಸಿದ್ದನು. ವಿಕಾಸ್ ಸಲಹೆಯಂತೆ ಇಬ್ಬರು ಗೆಳೆಯರು ಸಿನಿಮಾ ಶೈಲಿಯಲ್ಲಿ ಆತನನ್ನು ಕುರ್ಚಿಗೆ ಕಟ್ಟಿ ಹಾಕಿ ಥಳಿಸುತ್ತಿರುವ ವೀಡಿಯೋ ಮಾಡಿದ್ದರು. ನಂತರ ಆ ವೀಡಿಯೋವನ್ನ ವಿಕಾಸ್ ತಂದೆ ಪ್ರೇಮ್ ಸಿಂಗ್ ಮೊಬೈಲ್ ಗೆ ಕಳುಹಿಸಿ, ಎರಡೂವರೆ ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು.
ವೀಡಿಯೋ ನೋಡಿದ ಪ್ರೇಮ್ ಸಿಂಗ್ ಆತಂಕಕ್ಕೊಳಗಾಗಿ ಮಗನ ಉಳಿಸಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದಾರೆ. ಅಖಾಡಕ್ಕಿಳಿದ ಪೊಲೀಸರು ಕೆಲವೇ ಗಂಟೆಯಲ್ಲಿ ವಿಕಾಸ್ ಮತ್ತು ಆತನ ಇಬ್ಬರು ಗೆಳೆಯರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು
ಕೆಲ ದಿನಗಳ ಹಿಂದೆ ಮಗ ನನ್ನ ಬಳಿ ಹಣ ಕೇಳಿದ್ದನು. ಈಗ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಂದು ಈ ವೀಡಿಯೋ ಬಂದಿದೆ ಎಂದು ನಮಗೆ ತೋರಿಸಿದರು. ಅಪಹರಣಕಾರರನ್ನು ಬಂಧಿಸಿದಾಗ ವಿಕಾಸ್ ಸೂಚನೆಯಂತೆಯೇ ಕಿಡ್ನ್ಯಾಪ್ ಮಾಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಕೊನೆಗೆ ವಿಕಾಸ್ ಸಹ 70 ಸಾವಿರ ರೂಪಾಯಿ ಸಾಲ ಹಿಂದಿರುಗಿಸಲು ಈ ಪ್ಲಾನ್ ಮಾಡಿರೋದು ಅಂತ ಹೇಳಿದ್ದಾರೆ. ಸದ್ಯ ಮೂವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ರಾಹುಲ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಬಾಲಕಿಯ ಅಪಹರಣಕ್ಕೆ ಯತ್ನ- ಆರೋಪಿಗಳನ್ನು ಕೊಂದ ಗ್ರಾಮಸ್ಥರು