ಹಾಸನ: ತನ್ನನ್ನು ರಕ್ಷಣೆ ಮಾಡಲು ಬಂದವರನ್ನೆ ನಾಗರಹಾವು ಕಚ್ಚಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಕೈಗಾರಿಕ ಪ್ರದೇಶದ ಕಾರ್ಖಾನೆಯೊಂದರಲ್ಲಿ ಹಾವು ಸೇರಿಕೊಂಡಿದ್ದು, ಯಂತ್ರವೊಂದರ ಬಿಡಿಭಾಗಕ್ಕೆ ಸಿಲುಕಿ ಪರದಾಡುತ್ತಿತ್ತು.
ಕಾರ್ಖಾನೆಯ ಸಿಬ್ಬಂದಿಯ ಮನವಿ ಮೇರೆಗೆ ಆಗಮಿಸಿದ ಸ್ನೇಕ್ ಶೇಷಪ್ಪ, ಹಾವನ್ನು ಹಿಡಿದು ಅದನ್ನು ಯಂತ್ರದ ಬಿಡಿಭಾಗದಿಂದ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಹೆದರಿದ ಹಾವು ಸ್ನೇಕ್ ಶೇಷಪ್ಪ ಅವರ ಬೆರಳಿಗೆ ಕಚ್ಚಿದ ಪರಿಣಾಮ ರಕ್ತ ಬಂದಿದೆ. ಹಾವು ಕಚ್ಚಿದರೂ ವಿಚಲಿತರಾಗದ ಸ್ನೇಕ್ ಶೇಷಪ್ಪ ಮೊದಲು ಯಂತ್ರದ ಬಿಡಿಭಾಗದಿಂದ ಹಾವನ್ನು ಬಿಡಿಸಿ ನಂತರ ಸುರಕ್ಷಿತ ಸ್ಥಳಕ್ಕೆ ಹಾವನ್ನು ಬಿಟ್ಟಿದ್ದಾರೆ.
ಹಾವನ್ನು ರಕ್ಷಿಸಿದ ನಂತರ ಸ್ನೇಕ್ ಶೇಷಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ನೇಕ್ ಶೇಷಪ್ಪ ಅವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವುದೇ ಸಮಸ್ಯೆಯಾಗದೆ ಆದಷ್ಟು ಬೇಗ ಗುಣಮುಖರಾಗುವಂತೆ ಅಭಿನಂದನೆ ಸಲ್ಲಿಸಿದ್ದಾರೆ.