ಲಕ್ನೋ: ತಣ್ಣಗಿರುವ ಚಪಾತಿ ನೀಡಿದ್ದಕ್ಕೆ ರೊಚ್ಚಿಗೆದ್ದ ಯುವಕರಿಬ್ಬರು ಡಾಬಾ ಮಾಲೀಕನ ಮೇಲೆ ಶೂಟೌಟ್ ಮಾಡಿದ ಅಮಾನವೀಯ ಗಟನೆಯೊಮದು ಉತ್ತರಪ್ರದೇಶದಲ್ಲಿ ನಡೆದಿದೆ.
ಡಾಬಾ ಮಾಲೀಕನನ್ನು ಅವದೇಶ್ ಯಾದವ್ ಎಂದು ಗುರುತಿಸಲಾಗಿದೆ. ರಾತ್ರಿ 11.30ರ ಸುಮಾರಿಗೆ ಯುವಕರಿಬ್ಬರು ಉತ್ತರಪ್ರದೇಶದ ಏಟಾ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯಲ್ಲಿರುವ ಡಾಬಾಗೆ ಬಂದಿದ್ದಾರೆ. ಅಂತೆಯೇ ಆಹಾರ ಆರ್ಡರ್ ಮಾಡಿದ್ದಾರೆ. ಬಳಿಕ ತಮಗೆ ಕೊಟ್ಟ ಚಪಾತಿ ತಣ್ಣಗಿದೆ ಎಂದು ದೂರಿದ ಯುವಕರು ಡಾಬಾ ಮಾಲೀಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಈ ಜಗಳ ತಾರಕ್ಕೇರಿದ್ದು, ಇಬ್ಬರಲ್ಲಿ ಓರ್ವ ಯುವಕ ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಮಾಲೀಕನ ಕಾಲಿಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಮಾಲೀಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ತೊಡೆಯ ಭಾಗದಲ್ಲಿ ಸಿಲುಕಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ. ಸದ್ಯ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧಿಸಿದಂತೆ ಆರೋಪಿಗಳಾದ ಅಮಿತ್ ಚೌಹಾಣ್ ಹಾಗೂ ಕೌಸ್ತುಭ್ ಮಿಶ್ರಾ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಪಿಸ್ತೂಲ್ ಅನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.