ಹಾಸನ: ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಮಳೆಯ ಪರಿಣಾಮ ತಡರಾತ್ರಿ ಮನೆಯೊಂದು ಕುಸಿದು ಬಿದ್ದಿದೆ. ಏನೋ ಶಬ್ದವಾಗುತ್ತಿದೆಯಲ್ಲ ಎಂದು ಮನೆಯಿಂದ ಹೊರಗೆ ಬಂದಿದ್ದಕ್ಕೆ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನವಿಲಹಳ್ಳಿ ಗ್ರಾಮದಲ್ಲಿ ಮನೆ ಕುಸಿತವಾಗಿದೆ. ಗ್ರಾಮದ ಯಶೋಧಮ್ಮ ಎಂಬವರ ಸೇರಿದ ಮನೆ ಇದ್ದಾಗಿದ್ದು, ತಡರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮನೆ ಕುಸಿಯಲು ಆರಂಭಿಸಿದೆ. ಈ ವೇಳೆ ಏನೋ ಶಬ್ದವಾಗುತ್ತಿದೆಯಲ್ಲ ಎಂದು ಮನೆಯಲ್ಲಿ ಮಲಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಆಗ ಮನೆಯವರ ಕಣ್ಣೆದುರೇ ವಾಸದ ಮನೆ ಮುರಿದುಬಿದ್ದಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ-ಮಲೆನಾಡು ಭಾಗದಲ್ಲಿ ಮನೆ ಕುಸಿತ
ಬಡತನದ ನಡುವೆ ತಮಗೆ ಆಸರೆಯಾಗಿದ್ದ ಮನೆ ಕುಸಿದು ಬಿದ್ದಿರುವುದರಿಂದ ಮನೆಯವರು ಕಂಗಾಲಾಗಿದ್ದಾರೆ. ಕೂಲಿಯಿಲ್ಲದೆ ಪರಿತಪಿಸುತ್ತಿರುವ ಕೊರೋನಾ ಸಮಯದಲ್ಲೇ ಮಳೆಯಿಂದ ಮನೆ ಕುಸಿದು ಬಿದ್ದಿದೆ. ನಾವೀಗ ಏನು ಮಾಡೋದು ಎಂದು ಯಶೋಧಮ್ಮ ಅಸಹಾಯಕತೆ ಹೊರಹಾಕಿದ್ದಾರೆ. ಸ್ಥಳಕ್ಕೆ ಮಾಜಿ ತಾ.ಪಂ. ಸದಸ್ಯ ಶಶಿಕುಮಾರ್ ಭೇಟಿ ನೀಡಿ ಟಾರ್ಪಲ್ ಹಾಗೂ ಐದು ಸಾವಿರ ರೂಪಾಯಿ ಹಣ ನೀಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಮನೆಕಳೆದುಕೊಂಡ ಯಶೋಧಮ್ಮ ಒತ್ತಾಯಿಸಿದ್ದಾರೆ.