ಮಡಿಕೇರಿ: ಅನ್‍ಲಾಕ್ ಬಳಿಕ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಸುರಿದ ಪರಿಣಾಮ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿತ್ತು. ಹೀಗಾಗಿ ಲಾಕ್‍ಡೌನ್ ನಿಂದ ಐದು ತಿಂಗಳ ಬಳಿಕ ತಲಕಾವೇರಿ ಬಾಗಮಂಡಲ ಸೇರಿದಂತೆ ಪ್ರಮುಖ ದೇವಾಲಯಗಳು ತೆರೆದರೂ ಭಕ್ತರ ಸಂಖ್ಯೆಯಲ್ಲಿ ಕೊರತೆ ಇತ್ತು. ಆದರೀಗ ಮಳೆಯೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ತಲಕಾವೇರಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಮಡಿಕೇರಿ ತಾಲೂಕಿನ ಪವಿತ್ರ ಪುಣ್ಯಕ್ಷೇತ್ರ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆದು ಐದು ತಿಂಗಳಾಗಿತ್ತು. ಅನ್‍ಲಾಕ್ ಬಳಿಕ ಬರಬೇಕೆಂದರೆ ಮಳೆ ಆರಂಭವಾಗಿ ಗುಡ್ಡ ಕುಸಿತವಾಯಿತು. ಹೀಗಾಗಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮಳೆ ಪ್ರಮಾಣ ತಗ್ಗಿದ್ದು, ಬರಲು ಅವಕಾಶ ಸಿಕ್ಕಿದ್ದು ಖುಷಿಯ ವಿಚಾರವಾಗಿದೆ ಎಂದು ತಲಕಾವೇರಿ ಅಗಮಿಸುವ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ಆಗಿದ್ದರಿಂದ ಕುಲದೇವರ ಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಲಾಕ್‍ಡೌನ್ ಸಡಿಲಿಕೆಯಾದರೂ ಕೊಡಗಿನಲ್ಲಿ ತೀವ್ರ ಮಳೆಯಾಗಿ ತಲಕಾವೇರಿಯಲ್ಲಿ ಭೂಕುಸಿತವಾಗಿ ಬರದಂತಹ ಸ್ಥಿತಿ ನಿರ್ಮಾಣ ಆಗಿತ್ತು. ಇದೀಗ ಅಪಾರ ಪ್ರಮಾಣದಲ್ಲಿ ಭಕ್ತ ದಂಡು ಹರಿದು ಬರುತ್ತಿದ್ದು, ತಲಕಾವೇರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.