ಶಿವಮೊಗ್ಗ: ತಂಪು ಪಾನೀಯ ಹಾಗೂ ಕುರ್ ಕುರೆ ಸೇರಿದಂತೆ ಇತರೆ ರೆಡಿಪುಡ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗದ ಗೋದಾಮಿನಲ್ಲಿ ಬೆಳಗಿನಜಾವ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ದುರ್ವೇಶ್ ಅಸೋಸಿಯೇಷನ್ ರಫೀಕ್ ಮಾಲೀಕತ್ವದ ಸಗಟು ವ್ಯಾಪಾರ ಮಳಿಗೆಯಾಗಿದ್ದು, ದುರ್ವೇಶ್ ಅಸೋಸಿಯೇಷನ್ ಮೂಲಕ ಇಡೀ ಜಿಲ್ಲೆಗೆ ತಂಪು ಪಾನೀಯ ಹಾಗೂ ಕುರುಕಲು ತಿಂಡಿಯನ್ನು ವಿವಿಧ ಅಂಗಡಿಗಳಿಗೆ ವಿತರಣೆ ಮಾಡಲಾಗುತ್ತದೆ.
ಬೆಳಗಿನ ಜಾವ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಕ್ಕದ ಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೋದಾಮಿನಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ ಆಗಿರುವುದರಿಂದ ಸಂಪೂರ್ಣ ಹಾನಿಯಾಗಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.