ಮೈಸೂರು: ಕೊರೊನಾದಿಂದ ಮೃತಪಟ್ಟ ತಂದೆಯ ಶವ ಕೂಡ ನೋಡಲು ಬಾರದ ಮಗ, ತಂದೆ ಶವ ಬೇಡ, ಹಣ ಬೇಕು ಎಂದು ಹೇಳಿರುವ ಘಟನೆ ಮೈಸೂರಲ್ಲಿ ನಡೆದಿದೆ.
ತಂದೆಯ ಶವ ನೀವೇ ಸುಟ್ಟು ಹಾಕಿ, ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ. ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ಕೊಡುತ್ತೇನೆ ಎಂದು ಮೃತರ ಮಗ ಹೇಳಿದ್ದಾನೆ.
ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಮೃತಪಟ್ಟಿರೋ ಬಗ್ಗೆ ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆಗ ಮಗ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ಎಲ್ಲಾ ತಂದು ಕೊಟ್ಟು ಬಿಡಿ ಎಂದ ಹೇಳಿದ್ದಾನೆ. ಆಗ ಪಾಲಿಕೆಯ ಸದಸ್ಯ ಶ್ರೀಧರ್, ಆತನಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದು ಕೊಂಡಿದ್ದಾರೆ.