ಚೆನ್ನೈ: ಒಬ್ಬ ತಂದೆ ಮಗನನ್ನು ಬೈಯಬಹುದು ಎಂದು ಹೇಳುವ ಮೂಲಕ ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಶ್ರೀನಿವಾಸನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಐಪಿಎಲ್‍ಗಾಗಿ ಸಿದ್ಧತೆ ನಡೆಸಿದ್ದ ರೈನಾ, ಯುಎಇಗೆ ತೆರಳಿದ್ದರು. ಆದರೆ ಇದಕ್ಕಿದ್ದಂತೆ ಅಗಸ್ಟ್ 29ರಂದು ರೈನಾ ಭಾರತಕ್ಕೆ ವಾಪಸ್ ಬಂದಿದ್ದರು. ವೈಯಕ್ತಿಕ ಕಾರಣದಿಂದ ಐಪಿಎಲ್‍ನಿಂದ ಹೊರ ಹೋಗಿದ್ದಾರೆ ಎಂದು ಸಿಎಸ್‍ಕೆ ತಂಡ ಹೇಳಿತ್ತು. ಇದಾದ ಬಳಿಕ ಶ್ರೀನಿವಾಸನ್ ಅವರು, ಕೆಲ ವಿವಾದತ್ಮಾಕ ಹೇಳಿಕೆಗಳನ್ನು ಕೊಟ್ಟಿದ್ದರು.
ಈಗ ಇದರ ಬಗ್ಗೆ ಖಾಸಗಿ ಕ್ರೀಡಾ ವಾಹಿನಿಯಲ್ಲಿ ಮಾತನಾಡಿರುವ ರೈನಾ, ಅವರು ನಮ್ಮ ತಂದೆಯಿದ್ದಂತೆ. ನಮಗೆ ಬಹಳ ಹತ್ತಿರದವರು. ಅವರು ನನ್ನನ್ನು ಕಿರಿಮಗನಂತೆ ನೋಡಿಕೊಳ್ಳುತ್ತಾರೆ. ಕೆಲ ಸಂದರ್ಭದಲ್ಲಿ ಬೇಸರವಾಗಿ ಮಾತನಾಡಿದ್ದಾರೆ. ಒಬ್ಬ ತಂದೆ ಮಗನನ್ನು ಬೈಯಬಹುದು ಅಲ್ಲವೆ. ನಾನು ಯುಎಇಯಿಂದ ಬರುವಾಗ ಅವರಿಗೆ ಏನೂ ಹೇಳಿ ಬಂದಿರಲಿಲ್ಲ. ಅದಕ್ಕಾಗಿ ಕೆಲ ಮಾತುಗಳನ್ನು ಆಡಿದ್ದಾರೆ. ನಂತರ ಅವರಿಗೆ ಮೆಸೇಜ್ ಮಾಡಿ ತಿಳಿಸಿದೆ. ಆಗ ಓಕೆ ಎಂದರು ಎಂದು ತಿಳಿಸಿದ್ದಾರೆ.
ರೈನಾ ಅವರು ಐಪಿಎಲ್‍ನಿಂದ ಹೊರಬರುತ್ತಿದ್ದಂತೆ ಮಾತನಾಡಿದ್ದ ಶ್ರೀನಿವಾಸನ್, ಕೆಲವೊಮ್ಮೆ ಯಶಸ್ಸು ನಿಮ್ಮ ತಲೆಗೆ ಸೇರುತ್ತದೆ. ನಾನು ಯಾರನ್ನು ಏನನ್ನೂ ಮಾಡಲು ಒತ್ತಾಯಿಸುವುದಿಲ್ಲ. ಆದರೆ ನೀವು ಹಿಂಜರಿಯುತ್ತಿದ್ದರೆ ಅಥವಾ ಸಂತೋಷವಾಗಿದ್ದರೆ ಹಿಂತಿರುಗಿ ಎಂದು ಹೇಳಿದ್ದರು. ಇದಾದ ನಂತರ ರೈನಾ ಅವರು ಹೊರಕ್ಕೆ ಬರಲು ರೂಮ್ ವಿಚಾರದಲ್ಲಿ ಜಗಳವಾಗಿದ್ದೆ ಕಾರಣ ಎಂದು ಹೇಳಲಾಗಿತ್ತು. ಇದನ್ನು ಓದಿ: ಧೋನಿ ನನ್ನ ದೊಡ್ಡಣ್ಣನಂತೆ – ಕೊನೆಗೂ ಮೌನ ಮುರಿದ ರೈನಾ
ಇದಾದ ನಂತರ ಮತ್ತೆ ಯೂಟರ್ನ್ ಹೊಡೆದಿದ್ದ ಶ್ರೀನಿವಾಸನ್, ಸಿಎಸ್‍ಕೆ ತಂಡಕ್ಕೆ ರೈನಾ ಅವರ ಕೊಡುಗೆ ಅದ್ಭುತವಾಗಿದೆ. ಸುರೇಶ್ ರೈನಾ ಅವರು ಇದೀಗ ಏನು ಮಾಡುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಂಡು ಅವರಿಗೆ ಅವಕಾಶ ನೀಡುವುದು ಮುಖ್ಯ. ನಮ್ಮ ತಂಡದ ಆಟಗಾರರು ಒಂದೇ ಕುಟುಂಬದಂತೆ. ಕಳೆದ ಒಂದು ದಶಕದಿಂದ ಕುಟುಂಬವಾಗಿದ್ದೇವೆ ಎಂದು ಹೇಳಿದ್ದರು.
ಐಪಿಎಲ್‍ನಿಂದ ಹೊರ ಬಂದಿದ್ದಕ್ಕೆ ಕಾರಣ ತಿಳಿಸಿರುವ ರೈನಾ, ಮಹಿಭಾಯ್ ನನ್ನ ದೊಡ್ಡಣ್ಣನಂತೆ. ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ, ಇವೆಲ್ಲ ಕಟ್ಟುಕಥೆ ಎಂದಿದ್ದಾರೆ. ಜೊತೆಗೆ ನಾನು ಐಪಿಎಲ್‍ನಿಂದ ಹೊರಬರಲು ಕೊರೊನಾ ವೈರಸ್ ಕಾರಣ, ಸದ್ಯ ದುಬೈನಲ್ಲಿ ಪರಿಸ್ಥಿತಿ ಸರಿಯಿಲ್ಲ. ನನಗೆ ಕುಟುಂಬವಿದೆ. ಎರಡು ಮಕ್ಕಳು, ವಯಸ್ಸಾದ ಪೋಷಕರು ಇದ್ದಾರೆ. ಇದೆಲ್ಲದರ ನಡುವೆ ನಾನು ಅಲ್ಲಿ ಉಳಿಯಲು ಆಗಲಿಲ್ಲ ಎಂದು ರೈನಾ ಹೇಳಿದ್ದಾರೆ.