ಕೋಲಾರ: ಸಾರಿಗೆ ಬಸ್ ಡ್ರೈವರ್ ಕಮ್ ಕಂಡಕ್ಟರ್ ಒಬ್ಬನಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಜಿಲ್ಲೆಯ ಮಾಲೂರು ಸೇರಿದಂತೆ ಹಲವೆಡೆ ಬಸ್‍ನಲ್ಲಿ ಸಂಚಾರಿಸಿದ್ದ ಪ್ರಯಾಣಿಕರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ.
ಕೋಲಾರ ವಿಭಾಗದ ಡಿಪೋನಲ್ಲಿ ಕಂಡಕ್ಟರ್ ಕಮ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿ ಪ್ರತಿನಿತ್ಯ ಮಾಲೂರು ಕೋಲಾರ ಮಾರ್ಗವಾಗಿ ಓಡಾಡುತ್ತಿದ್ದ ಬಸ್‍ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈತನಲ್ಲಿ ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
Advertisement
Advertisement
ಪ್ರತಿನಿತ್ಯ ಚಾಲಕ ಪ್ರಯಾಣಿಕರನ್ನು ಕರೆದುಕೊಂಡು ಕೋಲಾರದಿಂದ ಮಾಲೂರಿಗೆ ಹತ್ತಕ್ಕೂ ಹೆಚ್ಚು ಬಾರಿ ಪ್ರಯಾಣಿಸಿದ್ದ. ಸದ್ಯ ಸಾರಿಗೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರೋದು ಆತಂಕಕ್ಕೆ ಕಾರಣವಾಗಿದ್ದು, ಸೋಂಕಿತ ಸಿಬ್ಬಂದಿ ಇದ್ದಂತ ಬಸ್‍ನಲ್ಲಿ ಪ್ರಯಾಣ ಮಾಡಿದ ಜನರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ.
Advertisement
ಚಾಲಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 19 ಜನರನ್ನು ಈಗಾಗಲೇ ಗುರುತು ಮಾಡಲಾಗಿದೆ. ಆದರೆ ದ್ವಿತೀಯ ಸಂಪರ್ಕಿತರಾದ ಬಸ್‍ನಲ್ಲಿ ಪ್ರಯಾಣ ಮಾಡಿದ ಜನರನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
Advertisement
ಬಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗುತ್ತಿದ್ದಂತೆ ಬಸ್ ಡಿಪೋ ದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಸೋಂಕಿತ ಚಾಲಕ ಕೋಲಾರ ಜಿಲ್ಲೆಗೆ ಕೊರೊನಾ ಸ್ಪ್ರೆಡರ್ ಆಗುತ್ತಾರಾ ಎಂಬ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಈ ಮಧ್ಯೆ ಇಂತಹ ಪ್ರಕರಣಗಳಿಂದ ಕೊರೊನಾ ಸೋಂಕು ಎಲ್ಲಿ ಹಳ್ಳಿ ಹಳ್ಳಿಗೂ ಹರಡುತ್ತದೋ ಎಂಬ ಭಯ ಜನಸಾಮಾನ್ಯರನ್ನು ಕಾಡುತ್ತಿದೆ.