– ಶಿಕ್ಷಕಿ ನಡೆಗೆ ಪೋಷಕರ ವಿರೋಧ
ಒಟ್ಟಾವಾ: ತರಗತಿಗೆ ವಿಭಿನ್ನವಾದ ಡ್ರೆಸ್ ಧರಿಸಿ ಹೋಗಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿ ಶಾಲೆಯಿಂದ ಹೊರ ಹಾಕಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಕಮ್ಲೂಪ್ಸ್‍ನಲ್ಲಿರುವ ನಾರ್ಕಾಮ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.
Advertisement
ಕರಿಸ್ ವಿಲ್ಸನ್ ಎಂಬ ವಿದ್ಯಾರ್ಥಿನಿ ಬಿಳಿ ಬಣ್ಣದ ಉದ್ದ ತೋಳಿನ ಟಿ-ಶರ್ಟ್ ಹಾಗೂ ಮೊಣಕಾಲು ಉದ್ದ ಬರುವ ಕಪ್ಪು ಬಣ್ಣದ ಟಾಪ್ ಧರಿಸಿದ್ದಳು. ಅಲ್ಲದೆ ಈ ನೀ ಲೆಂಥ್ ಟಾಪ್‍ನನ್ನು ಭುಜದ ಮೇಲೆ ಲೇಸ್ ಮಾದರಿ ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿನಿ ಧರಿಸಿದ್ದ ಈ ಡ್ರೆಸ್ ಟೈಟ್ ಫಿಟ್‍ನಿಂದ ಕೂಡಿದ್ದು, ಶಾಲೆಯಲ್ಲಿರುವ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯನ್ನು ಪ್ರಿನ್ಸಿಪಾಲ್ ಕಚೇರಿಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ. ಬಳಿಕ ಆಕೆಯನ್ನು ಶಾಲೆಯಿಂದ ಹೊರಹಾಕಿದ್ದಾರೆ.
Advertisement
Advertisement
ಈ ವಿಚಾರವಾಗಿ ಬಾಲಕಿಯ ತಂದೆ ಕ್ರಿಸ್ಟೋಫರ್ ವಿಲ್ಸನ್ ವೀಡಿಯೋವೊಂದನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮಗಳು ಇಂದು ಶಾಲೆಗೆ ಹೊರಡುವಾಗ ಬಹಳ ಉತ್ಸುಕಳಾಗಿ ಹೋದಳು. ಆದರೆ ಮನೆಗೆ ಹಿಂದಿರುಗುವ ವೇಳೆ ಕಣ್ಣೀರಿಡುತ್ತಾ ಬಂದಿದ್ದಾಳೆ. ನನ್ನ ಮಗಳು ಧರಿಸಿದ್ದ ಡ್ರೆಸ್ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಶಾಲೆಯಿಂದ ಹೊರದಬ್ಬಿದ್ದಾರೆ. ಆದರೆ ಆಕೆ ಧರಿಸಿದ್ದ ಡ್ರೆಸ್ ಕೆಟ್ಟ ರೀತಿಯಲ್ಲಿರಲಿಲ್ಲ. ಇದೊಂದು ಸಾಧಾರಣ ಉಡುಪಾಗಿದೆ. ನಾನು ಈ ವ್ಯವಸ್ಥೆಯನ್ನು ಖಂಡಿಸುತ್ತೇನೆ. 2021ನೇ ಇಸವಿಯಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿದೆ ಎಂಬುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.