ಚಿಕ್ಕಮಗಳೂರು: ಡ್ರಗ್ ಮಾಫಿಯಾ ತನಿಖೆ ಚುರುಕುಗೊಂಡಿದ್ದು, ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಬಳಿಕ ಮಾತನಾಡಿದ ಅವರು, ಕೆಲವರು ಇಂತಹ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡು ಈ ಹಿಂದೆ ರಾಜಕಾರಣ ಮಾಡಿದ್ದಾರೆ. ಅಧಿಕಾರ ನಡೆಸಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದವರಿಗೆ ಓಲೈಸುವ, ಒತ್ತಡ ತರುವ ಕೆಲಸ ಮಾಡಬಹುದು. ಆದರೆ, ಬಿಜೆಪಿ ಇಂತಹವರ ಜೊತೆ ರಾಜಿ ಮಾಡಿಕೊಂಡು ಸರ್ಕಾರ ಮಾಡಿಲ್ಲ. ಹಾಗಾಗಿ ಅವರು ಒತ್ತಡ ತರುವ ಪ್ರಶ್ನೆ ಇಲ್ಲ. ಒಂದು ವೇಳೆ ಒತ್ತಡವಿದ್ದಿದ್ದರೆ ಇಷ್ಟು ಸಮಗ್ರ ತನಿಖೆಯೂ ನಡೆಯುತ್ತಿರಲಿಲ್ಲ.
ರಾಜ್ಯದ ಇತಿಹಾಸದಲ್ಲಿ ಡ್ರಗ್ ಕೇಸ್ ಹೊಸದಲ್ಲ. ಆದರೆ ಇಷ್ಟು ಗಂಭೀರವಾಗಿರುವುದು ಇದೇ ಮೊದಲು. ಈಗ ತನಿಖೆ ನಡೆಯುತ್ತಿದೆ. ತನಿಖೆಯ ಎಳೆ ಯಾರ್ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ. ಆಗ ಎಲ್ಲ ವಿಷಯವೂ ಹೊರಬರುತ್ತೆ. ಅಲ್ಲಿವರೆಗೂ ಕಾಯಬೇಕು. ಸಾಂದರ್ಭಿಕ ಸಾಕ್ಷಿಯಲ್ಲಿ ನಟಿ ರಾಗಿಣಿ ಮೇಲೆ ಸಂಶಯ ಬಂದು ತನಿಖೆ ನಡೆಯುತ್ತಿದೆ. ಅವರಿಗೆ ನೇರವಾಗಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲ. ನಟಿಯಾಗಿ ತನ್ನದೇ ಆದ ಸ್ಥಾನ ಪಡೆದಿದ್ದಾರೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಯಾರು ತಪ್ಪು ಮಾಡಿದ್ದರೂ ನಮ್ಮ ಸರ್ಕಾರ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೆ ಎಂಬುದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ನಡೆಸುತ್ತಿರುವ ತನಿಖೆಯ ದಾಟಿಯೇ ಸಾಕ್ಷಿ. ಯಾರೇ ಇದ್ದರೂ ಕಾಂಪ್ರಮೈಸ್ ಮಾಡ್ಕೊಂಡು, ಅವರ ಜೊತೆ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ರಾಜಕಾರಣ ಮಾಡುವ ಪಕ್ಷ ಬಿಜೆಪಿಯಲ್ಲ. ನಮ್ಮ ಸರ್ಕಾರವೂ ಅಷ್ಟೇ ನಿಷ್ಪಕ್ಷಪಾತವಾದ ತನಿಖೆ ನಡೆಸುತ್ತಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹೊಸ ಆಯಾಮಗಳೇನಾದರೂ ಸಿಕ್ಕರೆ ಅದಕ್ಕೆ ತಕ್ಕ ಸಹಕಾರ ಹಾಗೂ ಸಹಾಯವನ್ನು ಕೇಂದ್ರದಿಂದಲೂ ಪಡೆಯಬಹುದು ಎಂದರು.