ಚಾಮರಾಜನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಳಿಕ ಸಿಎಂ ಪುತ್ರ ವಿಜಯೇಂದ್ರ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾ.ಪಂ.ಚುನಾವಣೆ ಹಿನ್ನೆಲೆಯಲ್ಲಿ ನಗರದ ನಂದಿ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಚುನಾವಣೆಗೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.
ಮೊದಲಿಗೆ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾಜಿ ಶಾಸಕ, ಕೊರೊನಾದಿಂದ ಮೃತಪಟ್ಟ ಸಿ ಗುರುಸ್ವಾಮಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು. ಈ ನಡುವೆ ಮಾಧ್ಯಮದ ಜೊತೆಗೆ ಮಾತನಾಡಿ ಡ್ರಗ್ ವಿಚಾರದಲ್ಲಿ ಯಾರನ್ನೂ ಕೂಡ ಉಳಿಸುವ ಪ್ರಶ್ನೆಯೇ ಇಲ್ಲ. ಚಿತ್ರರಂಗ ಸೇರಿದಂತೆ ಇನ್ಯಾವುದೇ ರಂಗದಲ್ಲಿದ್ರೂ ಕೂಡ ಅವರ ಮೇಲೆ ಸಾಫ್ಟ್ ಕಾರ್ನರ್ ವಹಿಸಲ್ಲ ಎಂದರು.
ಹತ್ತಾರು ವರ್ಷಗಳಿಂದ ಡ್ರಗ್ ದಂಧೆ ನಡೆಯುತ್ತಿದ್ದರೂ ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈ ಡ್ರಗ್ ಮಾಫಿಯಾವನ್ನು ರಾಜ್ಯದಿಂದ ಕಿತ್ತು ಬಿಸಾಕಿ, ತಾರ್ಕಿಕ ಅಂತ್ಯ ಕಾಣಬೇಕಾಗಿದೆ. ಡ್ರಗ್ ಮಾಫಿಯಾದಿಂದ ಯುವಕರು ದಾರಿ ತಪ್ಪುತ್ತಿದ್ದಾರೆಂದು ವಿಜಯೇಂದ್ರ ಅಭಿಪ್ರಾಯಪಟ್ಟರು. ಸಂಜನಾ ಜೊತೆಗೆ ಜಮೀರ್ ಅಹ್ಮದ್ ಅವರ ನಂಟು ವಿಚಾರದ ಕುರಿತಂತೆ, ಇದು ವಿಚಾರಣೆ ನಡೆದಿದೆ. ಈ ಬಗ್ಗೆ ನಾನು ಈಗಲೇ ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಿದರು.