ಬೆಂಗಳೂರು: ಡ್ರಗ್ಸ್ ಮಾಫಿಯಾ ಕುರಿತಂತೆ ಈಗಾಗಲೇ ಸಿಸಿಬಿ ಅಧಿಕಾರಿಗಳು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಸುಳಿವು ಸಿಕ್ಕಿದ್ದು, ಕೆಲ ಸಿನಿಮಾ ನಟರು ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ ಎಂದು ಹೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ, ಸತತವಾಗಿ ನಾವು ಡ್ರಗ್ಸ್ ಜಾಲದ ಮೇಲೆ ರೇಡ್ ಮಾಡುತ್ತಿದ್ದು, ತಂತ್ರಜ್ಞಾನ ಬಳಿಸಿ ಎಲ್ಲೆಲ್ಲಿ ಸಪ್ಲೈ ಎಲ್ಲೆಲ್ಲಿ ಆಗ್ತಿದೆ ಆಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ಸ್ವಯಂ ಹೇಳಿಕೆ ಕೊಟ್ಟವರೂ ಮಹತ್ವದ ಸುಳಿವನ್ನು ಕೊಟ್ಟಿದ್ದಾರೆ. ಕೇವಲ ಸಿಸಿಬಿ ಮಾತ್ರವಲ್ಲ, ಎಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕ್ರೈಂ ಬ್ರ್ಯಾಂಚ್ ಹೆಚ್ಚು ಜಾಗೃತವಾಗಿರುವಂತೆ ಸೂಚಿಸಿದ್ದೇವೆ. ಕಸ್ಟಮ್ಸ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಎಲ್ಲಿಂದ ಸಪ್ಲೈ ಬರುತ್ತಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ವಿವರಿಸಿದರು.
ಕಳೆದ ಆರು ತಿಂಗಳಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಡ್ರಗ್ಸ್ ದಂಧೆ ಕುರಿತು ಹೇಳಿಕೆ ಕೊಟ್ಟವರನ್ನು ಕರೆದು ವಿಚಾರ ಮಾಡುತ್ತಿದ್ದು, ನಮ್ಮದೇ ಆದ ಮಾಹಿತಿಯಿಂದ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಜಾಲ ಪತ್ತೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ರೇವ್ ಪಾರ್ಟಿ ಗಳಲ್ಲಿ ಭಾಗಿಯಾದವರ ಬಗ್ಗೆ ತನಿಖೆ ನಡೆಯುತ್ತಿದೆ. ಸಾಕ್ಷಿ ಆಧಾರ ಕಲೆ ಹಾಕಲಾಗುತ್ತಿದ್ದು, ಬರುವ ದಿನಗಳಲ್ಲಿ ಮಟ್ಟ ಹಾಕಲು ಕ್ರಮ ಆಗುತ್ತೆ ಎಂದರು. ಇದನ್ನೂ ಓದಿ: ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಬೊಮ್ಮಾಯಿಗೆ ತಾರಾ ಮನವಿ
ಕೇವಲ ಸಿಸಿಬಿ ಮಾತ್ರ ಡ್ರಗ್ಸ್ ಮಾಫಿಯಾ ತಡೆಯುವ ಬಗ್ಗೆ ತನಿಖೆ ಮಾಡುವುದರಿಲ್ಲ. ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೆಲಸ ಆಗುತ್ತೆ. ಈ ಬಗ್ಗೆ ಸೂಚನೆ ನೀಡಿದ್ದು, ದೊಡ್ಡ ಕಾರ್ಯಾಚರಣೆ ಮಾಡಲು ತಿಳಿಸಿದ್ದೇನೆ. ತನಿಖೆಯಿಂದ ಹೊಸ ಹೊಸ ಸಾಕ್ಷಿ ಸಿಗುತ್ತಿದ್ದು, ಎಲ್ಲವೂ ತಿಳಿಯುತ್ತೆ. ಊಹಾಪೋಹದ ಮೇಲೆ ಯಾರ ಹೆಸರು ಹೇಳುವುದಿಲ್ಲ. ಸಾಕ್ಷಿ ಆಧಾರ ಇಟ್ಟುಕೊಂಡು ನೋಟಿಸ್ ಕೊಡುತ್ತೇವೆ. ಯಾವುದೇ ರಂಗದವರು ಇದ್ದರು ಯಾರನ್ನು ಬಿಡೋದಿಲ್ಲ. ಎಷ್ಟೇ ಪ್ರಭಾವಿಗಳು ಇದ್ದರು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.