ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಬೆಂಗಳೂರಿನ ಕಾಂಗ್ರೆಸ್ ಕಾರ್ಪೋರೇಟರ್ ಮಗನಿಗೆ ಎನ್‍ಸಿಬಿ ನೋಟಿಸ್ ಜಾರಿ ಮಾಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳೆದ ಮೂರು ದಿನಗಳ ಹಿಂದೆ ರಾಜಾಜಿನಗರದ ಫಸ್ಟ್ ಬ್ಲಾಕ್‍ನಲ್ಲಿರುವ ಕಾರ್ಪೋರೇಟರ್ ಕೇಶವಮೂರ್ತಿ ಅವರ ನಿವಾಸದ ಮೇಲೆ ಎನ್‍ಸಿಬಿ ದಾಳಿ ನಡೆಸಿತ್ತು. ಇದೀಗ ಕಾರ್ಪೋರೇಟರ್ ಮಗನಿಗೆ ಎನ್‍ಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ದಾಳಿ ಇದಾಗಿದ್ದು, ಕಾರ್ಪೋರೇಟರ್ ಪುತ್ರ ಡಾರ್ಕ್‍ನೆಟ್ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಎನ್‍ಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಎನ್‍ಸಿಬಿ ಅಧಿಕಾರಿಗಳಿಗೆ ಯಾವುದೇ ಸಾಕ್ಷ್ಯ ಲಭ್ಯವಾಗಿರಲಿಲ್ಲ. ದಾಳಿ ಬಳಿಕ ಇದೀಗ ಬೆಂಗಳೂರಿನ ಎನ್‍ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆದೊಯ್ಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಪೋರೇಟರ್ ಕೇಶವಮೂರ್ತಿ, ನನ್ನ ಮಗನಿಗೆ ನೋಟಿಸ್ ವಿಚಾರ ನನಗೆ ಗೊತ್ತಿಲ್ಲ. ಮಗನಿಗೆ 26 ವರ್ಷ, ಡಿಗ್ರಿ ಅಪೂರ್ಣವಾಗಿದೆ. ಮಗನಿಗೆ ಸಿನಿಮಾದವರ ಯಾವುದೇ ಲಿಂಕ್ ಇಲ್ಲ. ಮಗ ಜಿಮ್ ಮಾಡಿಕೊಂಡು ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ.