ಹಾಸನ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ನಟ, ನಟಿಯರನ್ನು ಬಂಧಿಸುತ್ತಿದ್ದು, ಡ್ರಗ್ಸ್ ವಿಚಾರ ಎತ್ತಿಕೊಂಡು ರಾಜ್ಯದ ಜನರನ್ನು ಸರ್ಕಾರ ಡೈವರ್ಟ್ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಗಡಿ ವಿಚಾರ, ರಾಮ ಮಂದಿರ ವಿಚಾರದಲ್ಲಿ ಜನರ ಸೆಳೆಯುತ್ತಿದೆ. ಇತ್ತ ಕರ್ನಾಟಕದಲ್ಲಿ ಕೋವಿಡ್‍ನಿಂದ ಜನ ಸಾಯುತ್ತಿದ್ದಾರೆ. ಆದರೆ ಗಮನ ಬೇರೆಡೆ ಸೆಳೆಯಲು ನಟ, ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಅಂತ ವಿಷಯಾಂತರ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ನಟ-ನಟಿಯರು ಡ್ರಗ್ಸ್ ತಗೊಂಡ್ರೆ ಕ್ರಮ ತೆಗೆದುಕೊಳ್ಳಲು ಪೊಲೀಸರು ಇದ್ದಾರೆ. ಯಾರು ಸಪ್ಲೈ ಮಾಡುತ್ತಿದ್ದಾರೆ ಅವರನ್ನು ಹಿಡಿಯುತ್ತಿಲ್ಲ. ಸಿನಿಮಾ ನಟ-ನಟಿಯರನ್ನು ಹಿಡಿಯುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಲು ಈ ರೀತಿ ಮಾಡುತ್ತಿದ್ದಾರೆ. ಯಾರದ್ದೋ ಹೇಳಿಕೆ ಇಟ್ಟುಕೊಂಡು ಹಣ ವಸೂಲಿ ಮಾಡುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ಆರೋಪಿಸಿದರು.
ಇಷ್ಟು ದಿನ ಡ್ರಗ್ಸ್ ಮಾಫಿಯಾ ಬಗ್ಗೆ ಕಣ್ಮುಚ್ಚಿ ಕುಳಿತಿದ್ರಾ. ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಮತ್ತು ಸರ್ಕಾರ ನೇರ ಹೊಣೆ. ಈ ಹಿಂದೆ ಕುಮಾರಸ್ವಾಮಿ ಇಸ್ಪೀಟ್ ದಂಧೆ ನಡೆಸುತ್ತಿದ್ದವರ ಕ್ಲಬ್ ಕ್ಲೋಸ್ ಮಾಡಿಸಿದಾಗ ಅವರು ಶ್ರೀಲಂಕಾಗೆ ಹೋದರು. ಅವರು ಬೇಲ್ ಸಿಗುವವರೆಗೂ ಇದ್ದು ನಂತರ ಬಂದರು. ಅವರ ಹಣವೇ ಸಮ್ಮಿಶ್ರ ಸರ್ಕಾರ ತೆಗೆಯುವಾಗ ಇದ್ದದ್ದು. ಪ್ರಚಾರಕ್ಕಾಗಿ ನಟ, ನಟಿಯರನ್ನು ಬಂಧಿಸುತ್ತಿದ್ದಾರೆ. ವಿಷಯ ಡೈವರ್ಟ್ ಮಾಡಲು ಮೂಲ ಇಲ್ಲದೆ ಬಳಕೆ ಮಾಡುತ್ತಿರುವವರನ್ನು ಹಿಡಿಯುತ್ತಿದ್ದಾರೆ. ಇದು ಸಾರ್ವಜನಿಕರಿಗೆ ಅರ್ಥ ಆಗಬೇಕು ಎಂದರು.
ಡ್ರಗ್ಸ್ ವಿಚಾರದಲ್ಲಿ ಹಿರಿಯ ರಾಜಕಾರಣಿಗಳು, ಬ್ಯುಸಿನೆಸ್‍ದಾರರ ಮಕ್ಕಳ ರಕ್ಷಣೆ ನಡೆಯುತ್ತಿದೆ ಎಂಬ ವಿಚಾರ ಬಗ್ಗೆ ಮಾತನಾಡುತ್ತಾ, ಇದು ಸತ್ಯವೂ ಇರಬಹುದು. ಹೀಗಾಗಿ ನಟ-ನಟಿಯರನ್ನು ಹಿಡಿದು ತಂತ್ರಗಾರಿಕೆ ನಡೆಯುತ್ತಿದೆ. ಪೊಲೀಸ್ ಇಲಾಖೆ ನಿನ್ನ ಹೆಸರು ಇದೆ ಎಂದು ಎಲ್ಲ ಪಕ್ಷದ ರಾಜಕಾರಣಿಗಳು, ಬ್ಯುಸಿನೆಸ್‍ದಾರರ ಮಕ್ಕಳ ಹೆಸರು ಹೇಳಿಕೊಂಡು ದಂಧೆ ನಡೆಸುತ್ತಿದೆ. ಆದರೆ ಅವರನ್ನು ಹಿಡಿಯಲು ಹೋಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.