– ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲು
ಬೆಂಗಳೂರು: ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಕೂಡ ಭಾಗಿಯಾಗಿದ್ದಾರೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ತುರುವೇಕೆರೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಡ್ಯಾನ್ಸ್ ಬಾರ್ ಗಳ ಹಣದಿಂದ ನಮ್ಮ ಸರ್ಕಾರ ತೆಗೆಯಲು ಬಳಸಿದ್ದರು ಎಂದು ನಾನು ಹೇಳಿದ್ದೆ. ನಾನು ಮೈತ್ರಿ ಸರ್ಕಾರದ ಸಿಎಂ ಆದ ಬಳಿಕ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಡ್ರಾನ್ಸ್ ಬಾರ್ ಸೇರಿದಂತೆ ಅಕ್ರಮ ದಂಧೆಗಳನ್ನು ಮುಚ್ಚಬೇಕು, ಕ್ರಮ ಆಗಬೇಕು ಎಂದು ಸೂಚನೆ ಕೊಟ್ಟಿದೆ. ನನ್ನ ಆದೇಶದ ಮೇರೆಗೆ ಹಲವು ಪ್ರದೇಶಗಳಲ್ಲಿ ರೇಡ್ ಆಗಿತ್ತು. ಆ ವೇಳೆ ರೇಡ್ ಆದ ಕೂಡಲೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಅಂದು ಶ್ರೀಲಂಕಾಗೆ ಓಡಿ ಹೋಗಿದ್ದ.
Advertisement
Advertisement
ವಿಧಾನಸೌಧದಲ್ಲಿ ನಾನು ಆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿಯ ಫೋಟೋವನ್ನು ತೋರಿಸಿದ್ದೇನೆ. ಆ ಬಳಿಕ ಆತ ಜಾಮೀನು ಪಡೆದು ವಾಪಸ್ ಆಗಿದ್ದ. ಆತನೇ ಮುಂಬೈಗೆ ಹಾರಿ ಹೋದ ಶಾಸಕರೊಂದಿಗೆ ಇದ್ದ, ಆ ವಿಡಿಯೋ ಎಲ್ಲರ ಬಳಿಯೂ ಇದೆ ಎಂದರು.
Advertisement
ನನಗೆ ಮದ, ಅಧಿಕಾರದ ಮತ್ತು ಬಂದಿಲ್ಲ. ವಿಶ್ವನಾಥ್ ಬಗ್ಗೆ ಚರ್ಚೆ ಮಾಡಿದರೆ ನನ್ನ ಬಗ್ಗೆ ನಾನೇ ಡಿ ಗ್ರೇಡ್ ಮಾಡಿಕೊಂಡಂತೆ. ಆ ವ್ಯಕ್ತಿಯ ನಡವಳಿಕೆ, ಅಭಿರುಚಿ ನನಗೆ ಗೊತ್ತಿದೆ. ಅವತ್ತೇ ನಾನು ಹೇಳಿದ್ದೆ, ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. 25 ಸಾವಿರ ಕೋಟಿ ರೂ. ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ್ದೆ. ಕೈಗಾರಿಕಾ ಕ್ಲಸ್ಟರ್ ಗೆ ಚಾಲನೆ ನೀಡಿದ್ದೆ. ಇಂದು ಮೋದಿ ಅವರು ಆತ್ಮ ನಿರ್ಭರ ಭಾರತ ಎಂದು ಮಾಡುತ್ತಿದ್ದಾರೆ. ನಾನು ಕಡಿಮೆ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ, ಕಳ್ಳ ಭಟ್ಟಿ, ಲಾಟರಿ, ಸಾರಾಯಿ ನಿಲ್ಲಿಸಿದ್ದೇನೆ. ರಾಜ್ಯಕ್ಕೆ ನನ್ನ ಕೊಡುಗೆ ಅಪಾರವಿದೆ ಎಂದು ತಿಳಿಸಿದರು.
Advertisement
ಡಾನ್ಸ್ ಬಾರ್, ನೈಟ್ ಬಾರ್ ಗಳಲ್ಲಿ ಡ್ರಗ್ ದಂಧೆಯ ಮೂಲವಿದೆ. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಬೆಳಗ್ಗೆ 4 ವರಗೆ ಪಾರ್ಟಿ ನಡೆಯುತ್ತಿತ್ತು. ವಿಠ್ಠಲ್ ಮಲ್ಯ ರೋಡ್ ನಲ್ಲಿ ಮೈಕ್ರೋ ಬ್ರೆವರೀಸ್ ಹೊಟೇಲ್ ಹಿಂದೆಯೂ ಪಾರ್ಟಿಗಳು ನಡೆಯುತ್ತಿತ್ತು. ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವವರು ಯಾರು? ಈ ಬಗ್ಗೆ ಸರ್ಕಾರ ತನಿಖೆ ಮಾಡಲಿ. ಸರ್ಕಾರದಲ್ಲಿ ಇರುವವರು ಡ್ರಗ್ಸ್ ದಂಧೆಯಲ್ಲಿ ತುಂಬಾ ಜನರಿದ್ದಾರೆ. ಪ್ರಕರಣದ ತಾರ್ಕಿಕ ಅಂತ್ಯ ಕಾಣಬೇಕಾದರೆ ಸೂಕ್ತ ತನಿಖೆ ಆಗಬೇಕು. ಸರಿಯಾದ ತನಿಖೆ ಆಗದೇ ಹೋದರೆ ಈ ಪ್ರಕರಣವೂ ಕೋಲ್ಡ್ ಸ್ಟೋರೇಜ್‍ಗೆ ಹೋಗುತ್ತೆ ಎಂದು ಎಚ್ಚರಿಸಿದರು.
ಸದ್ಯ ಕೇವಲ ಕೆಲ ನಟ-ನಟಿಯರ ಮೇಲೆ ದಾಳಿ ಆಗಿದೆ. ಅವರು ಮಾತ್ರ ಡ್ರಗ್ಸ್ ದಂಧೆಯಲ್ಲಿದ್ದಾರಾ? ಇನ್ನೂ ಅನೇಕ ಜನ ಇದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳು ದಂಧೆಯಲ್ಲಿದ್ದಾರೆ ಎಂದು ಆರೋಪಿಸಿದರು.
ಡ್ರಗ್ಸ್ ಬಗ್ಗೆ ಸದನಲ್ಲಿ ಚರ್ಚೆ ಮಾಡುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಪರವಾದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಡಿಜೆ ಹಳ್ಳಿ ಗಲಭೆ ಬಗ್ಗೆ ಚರ್ಚೆ ಮಾಡಿ ಪ್ರಯೋಜನವೂ ಇಲ್ಲ. ಶಾಸಕರೇ ಏಕೆ ಆಯ್ತು ಅಂತ ಹೇಳಿದ್ದಾರೆ. ಈ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಅಂತ ಹೇಳಿದ್ದಾರೆ, ಆದರೆ ತನಿಖೆ ಎಲ್ಲಿಗೆ ಬಂತು. ಕಾಂಗ್ರೆಸ್ ಪಕ್ಷದವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಗತ್ ಜಾಹೀರಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ. ಆದ್ದರಿಂದ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನ. ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದ್ರೆ ದೇವರೆ ಸರ್ಕಾರವನ್ನು ಕಾಪಾಬೇಕು. ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ದೇವರೆ ಕಾಪಾಡಬೇಕು ಅಷ್ಟೇ ಎಂದರು.