ಡ್ರಗ್ಸ್ ಮಾಫಿಯಾಗೆ ಥಳಕು ಹಾಕಿಕೊಂಡ ಅಡಿಕೆ ಉತ್ಪನ್ನಗಳು

Public TV
2 Min Read
areca adike adake

– ಮತ್ತೆ ಅಡಿಕೆ ನಿಷೇಧದ ಗುಮ್ಮ
– ಸುಳ್ಳು ವದಂತಿಗೆ ಚಿಂತೆಗೀಡಾದ ಬೆಳೆಗಾರರು

ಶಿವಮೊಗ್ಗ: ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ವದಂತಿ ಹರಿದಾಡುತ್ತಿದ್ದು, ಅಡಿಕೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ.

ಸುಗ್ರೀವಾಜ್ಞೆ ಮೂಲಕ ಪಾನ್ ಮಸಾಲ ನಿಷೇಧ ಮಾಡಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ್ದು, ರೈತರು ಇದರ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಗುಟ್ಕಾ ನಿಷೇಧವಾದರೆ ರಾಜ್ಯದ ಅಡಿಕೆ ಬೆಳೆಗಾರರು, ಬೀದಿ ಪಾಲಾಗಲಿದ್ದಾರೆ. ಅಡಿಕೆ ಕೃಷಿ ಮತ್ತು ಉದ್ಯಮದಲ್ಲಿ ರಾಜ್ಯದಲ್ಲೇ 50 ಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಬೀದಿಗೆ ಬೀಳುವ ಸಾಧ್ಯತೆಯಿದೆ.

areca palm adike adake

ಅಡಿಕೆ ಆರೋಗ್ಯಕ್ಕೆ ಹಾನಿಕರ, ಅಡಿಕೆ ಉತ್ಪನ್ನವನ್ನು ನಿಷೇಧಿಸಬೇಕು ಎಂಬ ಅಂಶ ಪದೇ ಪದೇ ಸಂಸತ್ ನಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಇದರ ನಡುವೆ ಈಗ ರಾಜ್ಯದಲ್ಲಿ ಸಹ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧದ ಗುಮ್ಮ ಹರಿದಾಡುತ್ತಿದೆ. ಇದು ಸಹಜವಾಗಿಯೇ ರಾಜ್ಯದ ಅಡಿಕೆ ಬೆಳೆಗಾರರಲ್ಲಿ, ಅತಂಕ ಸೃಷ್ಟಿ ಮಾಡಿದೆ. ಗುಟ್ಕಾ ಮತ್ತು ಪಾನ್ ಮಸಾಲಾ ಪ್ಯಾಕೇಟ್ ನಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಸುದ್ದಿಯಾಗುತ್ತಿದೆ.

ಸುಳ್ಳು ಸುದ್ದಿ: ಪ್ರತಿ ವರ್ಷ ಅಡಿಕೆ ವಿರುದ್ಧದ ಲಾಬಿಯೊಂದು ಈ ರೀತಿಯ ಸುದ್ದಿಯನ್ನು ಹುಟ್ಟು ಹಾಕುತ್ತದೆ. ಅಂತಹವರು ಗುಟ್ಕಾ ಪ್ಯಾಕೇಟ್‍ನಲ್ಲಿ ಮಾದಕ ವಸ್ತುಗಳ ಮಾರಾಟ ಆಗುತ್ತೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಡ್ರಗ್ಸ್‍ಗೂ ಅಡಿಕೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸಿಎಂಗೆ ಮನವರಿಕೆ ಮಾಡಲಾಗಿದೆ. ಸಿಎಂ ಕೂಡ ಈ ಬಗ್ಗೆ ಚರ್ಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

areca 1

ಕಾಣದ ಕೈಗಳ ಲಾಬಿ: ಡ್ರಗ್ಸ್ ವ್ಯಾಪಾರಕ್ಕೆ ಸರ್ಕಾರ ಕಡಿವಾಣ ಹಾಕಬೇಕು, ಅದನ್ನು ಬಿಟ್ಟು ಗುಟ್ಕಾ ನಿಷೇಧಕ್ಕೆ ಮುಂದಾಗಿದೆ. ಇದರ ಹಿಂದೆ ಕೆಲವು ಕಾಣದ ಕೈಗಳ ಲಾಬಿ ಇದೆ. ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೆಟ್ ನಲ್ಲಿ ಡ್ರಗ್ಸ್ ಪೂರೈಸಲು ಸಾಧ್ಯವಿಲ್ಲ. ಕೇವಲ 5 ರೂಪಾಯಿಗೆ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಸಾವಿರಾರು ರೂಪಾಯಿ ಬೆಲೆಯ ಡ್ರಗ್ಸ್ ಮಾರಾಟ ಮಾಡಲು ಹೇಗೆ ಸಾಧ್ಯ ಎಂದು ರೈತರು ಪ್ರಶ್ನೆ ಮಾಡಿದ್ದಾರೆ.

ಗುಟ್ಕಾ ಪ್ಯಾಕೆಟ್ ನಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುವವರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಅದನ್ನು ಬಿಟ್ಟು ಗುಟ್ಕಾ ನಿಷೇಧ ಮಾಡುತ್ತೇವೆ ಎಂದರೆ ಸರ್ಕಾರಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಗುಟ್ಕಾ ನಿಷೇಧಕ್ಕೆ ಮುಂದಾದರೆ ರಾಜ್ಯ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

areca

ಅಡಿಕೆಯನ್ನು ಈ ಹಿಂದಿನಿಂದಲೂ ಆಹಾರದ ಒಂದು ಉಪ ಉತ್ಪನ್ನವಾಗಿ ಬಳಸಲಾಗುತ್ತಿದೆ. ಕಳೆದ 3 ದಶಕದಿಂದ ಈಚೆಗೆ ಅಡಿಕೆಯನ್ನು ಪಾನ್ ಮಸಾಲ ಮತ್ತು ಗುಟ್ಕಾ ಉತ್ಪಾದಿಸಲು ಬಳಸಲಾಗುತ್ತಿದೆ. ಇದರಿಂದಾಗಿ ಅಡಿಕೆ ಬೆಳೆ ಒಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ರಾಜ್ಯದಲ್ಲಿ ಸುಮಾರು 12 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕೆಂಪು ಅಡಿಕೆಯನ್ನು ಗುಟ್ಕಾ ಉತ್ಪಾದನೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತಿದೆ. ರಾಜ್ಯದಲ್ಲಿ 50 ಲಕ್ಷ ಜನರು ಇದರಲ್ಲಿ ಜೀವನ ಕಂಡುಕೊಂಡಿದ್ದಾರೆ. ಒಂದು ವೇಳೆ ಗುಟ್ಕಾ ನಿಷೇಧ ಮಾಡಿದರೆ, ಅಡಿಕೆ ಬೆಳೆಯುವ ಪ್ರದೇಶದ ಶಾಸಕರು ಮತ್ತು ಸಂಸದರು ಓಡಾಡುವುದು ಕಷ್ಟವಾಗಲಿದೆ ಎಂದು ಬೆಳೆಗಾರರು ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *