ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಕಿರುತೆರೆ ನಟಿ ರಜನಿ ಸೇರಿ ನಾಲ್ವರಿಗೆ ಆಂತರಿಕ ಭದ್ರತಾ ದಳ (ಐಎಸ್‍ಡಿ) ನೋಟಿಸ್ ನೀಡಿದೆ.
ಡ್ರಗ್ಸ್ ಕೇಸ್ ಪೆಡ್ಲರ್ ಗಳ ಜೊತೆ ಸಂಬಂಧ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಐಎಸ್ ಡಿ ಅಧಿಕಾರಿಗಳು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಇತ್ತ ಪೊಲೀಸರು ರಾಜಕಾರಣಿಯ ಮಗ, ಹಾಲಿ ರಾಜಕಾರಣಿಯ ಮೊಮ್ಮಗನನ್ನು ಕೂಡ ವಿಚಾರಣೆ ಕರೆತಂದು ರಕ್ತದ ಪರೀಕ್ಷೆಯನ್ನು ನಡೆಸಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ರಾಜಕಾರಣಿಯ ಮಗ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದರು. ಅಲ್ಲದೇ ನ್ಯಾಯಾಲಯದ ಅನುಮತಿ ಪಡೆದು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಇಬ್ಬರ ಪೈಕಿ ಒಬ್ಬರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತ ಪ್ರಕರಣದಿಂದ ಬಚಾವ್ ಆಗಿದ್ದಾನೆ. ಮತ್ತೊಬ್ಬನ ವರದಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯ ರಾಜಕಾರಣಿಯ ಮಗನ ವರದ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಹೆಸರನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಕೇಸಿಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಟ ಲೂಸ್ ಮಾದ ಯೋಗಿ, ಕಿರುತೆರೆ ನಟಿಯರಾದ ಗೀತಾಭಾರತಿ ಭಟ್, ರಶ್ಮಿತಾ ಚೆಂಗಪ್ಪ ಹಾಗೂ ಕಿರುತೆರೆ ನಟ ಅಭಿಷೇಕ್ ದಾಸ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.