ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪುತ್ರ ದರ್ಶನ್ ಕುಮಾರ್ ಬಂಧನದ ಕುರಿತು ಮಾಜಿ ಸಚಿವ ರುದ್ರಪ್ಪ ಲಮಾಣಿ ತಮ್ಮ ಮೊದಲ ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಡ್ರಗ್ಸ್ ಕೇಸ್ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ಮಗನ ಬಂಧನವಾಗಿರುವ ವಿಷಯ ತಿಳಿಯಿತು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರುದ್ರಪ್ಪ ಲಮಾಣಿ, ಮಾಧ್ಯಮಗಳ ಮೂಲಕವೇ ಮಗನ ಬಂಧನವಾಗಿರುವ ವಿಷಯ ನನಗೆ ತಿಳಿದಿದೆ. ಯಾವುದೋ ಪಾರ್ಸೆಲ್ ಬಿಡಿಸಿಕೊಂಡು ಬಂದಿರೋ ಹುಡುಗು ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಿದ್ದಾನೆ. ನಂತರ ಅದೇ ಪಾರ್ಸೆಲ್ ಸಿಸಿಬಿ ಅಧಿಕಾರಿಳಿಗೆ ಹಸ್ತಾಂತರಿಸಲಾಗಿದೆ. ಪಾರ್ಸೆಲ್ ನೀಡಿರುವ ಕೆಲವರ ಹೆಸರು ಹೇಳಿದ್ದು, ಅದರಲ್ಲಿ ಪುತ್ರ ದರ್ಶನ್ ಹೆಸರು ಇದೆಯಂತೆ. ಹಾಗಾಗಿ ಸಿಸಿಬಿ ಅಧಿಕಾರಿಗಳು ಮಗನನ್ನು ವಿಚಾರಣೆಗೆ ಒಳಪಡಿಸಿರಬಹುದು. ಹೆಚ್ಚಿನ ಮಾಹಿತಿ ನನಗೂ ಗೊತ್ತಿಲ್ಲ ಎಂದ್ರು.
ಪುತ್ರ ರಾಣೇಬೆನ್ನೂರಿನ ಕಾಲೇಜಿನಲ್ಲಿ ಓದುತ್ತಿದ್ದಾನೆ. ಈ ವರ್ಷ ಯಾವುದೇ ಕಾಲೇಜಿಗೆ ದಾಖಲಾಗಿಲ್ಲ. ವಿಚಾರಣೆ ನಡೆಸುವದರಲ್ಲಿ ಯಾವುದೇ ತಪ್ಪಿಲ್ಲ. ಯಾವ ಅಧಿಕಾರಿಗಳು ನನ್ನ ಗಮನಕ್ಕೆ ಬಂದಿಲ್ಲ. ಇಂದು ಬೆಂಗಳೂರಿಗೆ ಬಂದಾಗ ಮಧ್ಯಾಹ್ನ ಸುಮಾರು 1.30ಕ್ಕೆ ಬಂಧನದ ವಿಷಯ ತಿಳಿಯಿತು. ನಮ್ಮ ಶ್ರೀಮತಿಯವರಿಗೂ ಈ ವಿಷಯ ಗೊತ್ತಿಲ್ಲ ಎಂದು ತಿಳಿಸಿದರು.
ಏನಿದು ಪ್ರಕರಣ?: ನವೆಂಬರ್ 5ರಂದು ಡ್ರಗ್ಸ್ ಪೆಡ್ಲರ್ ಸುಜಯ್ ಎಂಬಾತನನ್ನು ಸಿಸಿಬಿ ಬಂಧಿಸಿತ್ತು. ಬಂಧಿತ ಸುಜಯ್ ಬಿಟ್ ಕಾಯಿನ್ಸ್ ಮುಖಾಂತರ ಡ್ರಗ್ಸ್ ಖರೀದಿಸುತ್ತಿದ್ದನು. ಬಂಧಿತನಿಂದ ಪೊಲೀಸರು 500 ಗ್ರಾಂ ಹೈಡ್ರೊ ಗಾಂಜಾ ವಶಕ್ಕೆ ಪಡೆದುಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಮತ್ತು ಸುನಿಶ್ ತಲೆ ಮರೆಸಿಕೊಂಡಿದ್ದರು. ಈ ಇಬ್ಬರಿಗೆ ದರ್ಶನ್ ಗೋವಾದಲ್ಲಿ ಆಶ್ರಯ ನೀಡಿದ ಆರೋಪಗಳು ಕೇಳಿ ಬಂದಿವೆ. ದರ್ಶನ್ ಲಮಾಣಿ ಸಹ ಆರೋಪಿಗಳಿಬ್ಬರ ಜೊತೆ ನಿಕಟ ಸಂಪರ್ಕ ಮತ್ತು ಅವರ ಜೊತೆಯಲ್ಲಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.