ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಪರಪ್ಪನ ಅಗ್ರಹಾರ ಸೇರಲಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲುಪಾಲದ ಮೊದಲ ನಟಿ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.
ಇಂದು ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಜನಾ, ರಾಗಿಣಿ ಜೊತೆ ಆರೋಪಿಗಳನ್ನು 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. 2ನೇ ಆರೋಪಿ ರಾಗಿಣಿ ಜೊತೆ ಎ4 ಪ್ರಶಾಂತ್ , ಎ7 ಸಾಂಬಾ, ಎ11 ರಾಹುಲ್, ಎ13 ನಿಯಾಸ್ ಅಹಮದ್‌ಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ನಟಿ ಸಂಜನಾರನ್ನು 5 ದಿನ ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ 2 ದಿನ ಕಸ್ಟಡಿಗೆ ನೀಡಿದೆ.
ಕೋರ್ಟ್‌ಗೆ ಹಾಜರು ಪಡಿಸುವ ಮುನ್ನ ಆರೋಪಿಗಳಾದ ರಾಗಿಣಿ, ಸಂಜನಾಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಲಾಯಿತು. ಇಬ್ಬರ ವರದಿ ನೆಗೆಟಿವ್ ಬಂದಿತ್ತು. ನಟಿಯರಿಬ್ಬರು ಜೈಲು ಸೇರುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಸರ್ಕಾರಿ ವಕೀಲರು ಜಾಮೀನು ಅರ್ಜಿಯ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಬುಧವಾರಕ್ಕೆ ನಟಿ ರಾಗಿಣಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ.
ರಾಜ್ಯ ಸರ್ಕಾರ ಕಳೆದ ವಾರ ಅಭಿಯೋಜಕರನ್ನು ನೇಮಕ ಮಾಡಿದೆ. ಅವರು ಬಂದು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದೆ. ತನಿಖಾ ಹಂತದಲ್ಲಿ ಇರುವ ಕಾರಣ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೇಳಿದರು. ಸಿಸಿಬಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿತು.
ರಾಗಿಣಿ ಸೇರಿದಂತೆ ಆರೋಪಿಗಳ ವಿರುದ್ಧ ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಯಾವ ಸೆಕ್ಷನ್ ಏನು ಹೇಳುತ್ತದೆ?
ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.
ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ
ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.
ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.
ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.
ಐಪಿಸಿ 120 ಬಿ – ಅಪರಾಧಿಕ ಒಳಸಂಚು.