ಕೋಲಾರ: ಡೋಂಗಿ ರೈತ ಮುಖಂಡರಿಗೆ ಉತ್ತರಿಸಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯೊಂದಿಗೆ ಡೀಲ್ ಮಾಸ್ಟರ್ ಆಗಿ ಮಾತನಾಡುವ ಹೀನಾಯ ಪರಿಸ್ಥಿತಿ ನನಗಿಲ್ಲ. ರೈತ ಸಂಘದ ಮುಖಂಡರು ನನ್ನ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆಯಿಂದ ಮಾತನಾಡಬೇಕು. ನನ್ನ ರಾಜಕೀಯದಲ್ಲಿ ಜನತೆಯ ಸ್ವಾಭಿಮಾನಕ್ಕೆ ಧಕ್ಕೆ ಬರುವ ಹಾಗೆ, ಕೀಳು ಮಟ್ಟದಲ್ಲಿ ನಡೆದುಕೊಂಡಿಲ್ಲ. ದೊಡ್ಡ ಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿರುವ ಮುಖ್ಯಮಂತ್ರಿ ನಾನು. ಇಷ್ಟೆಲ್ಲ ಮಾಡಿದರೂ ಅವರ ಯೋಗ್ಯತೆಗೆ ಒಂದು ಥ್ಯಾಂಕ್ಸ್ ಹೇಳಲಿಲ್ಲ, ಇಂತಹವರೊಂದಿಗೆ ಚರ್ಚೆ ಮಾಡುವುದು ಅನವಶ್ಯಕ ಎಂದರು.
Advertisement
Advertisement
ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ, ಇವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ. ಹೊಟ್ಟೆ ಪಾಡಿನ ರಾಜಕೀಯ ಅವರದ್ದು, ನಾನು ಸ್ವಾಭಿಮಾನಕ್ಕೆ ಬದುಕಿರುವವನು. ನನ್ನ ಪಕ್ಷವನ್ನ ಸಂಘಟನೆ ಮಾಡುವುದಕ್ಕೆ ಬೆಳಗ್ಗೆ ಒಂದು ರಾಜಕೀಯ ಸಂಜೆ ಒಂದು ರಾಜಕೀಯ ನಡೆಯುತ್ತದೆ. ಆದರೆ ನೀವು ರೈತರ ಹೆಸರಲ್ಲಿ ಡೋಂಗಿಯಾಗಿ ಕೆಲಸ ಮಾಡುತ್ತಿದ್ದೀರಿ, ಮೊದಲು ನಿಮ್ಮಲ್ಲಿರುವ ಹುಳಕನ್ನ ಮುಚ್ಚಿಕೊಳ್ಳಿ. ನನ್ನ ಹತ್ತಿರ ನಿಮ್ಮ ಆಟಗಳು ನಡೆಯುವುದಿಲ್ಲ ನಿಮ್ಮ ಬಳಿ ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.
Advertisement
Advertisement
ಕಾಂಗ್ರೆಸ್ ವಿರುದ್ಧ ಗುಡುಗಿದ ಅವರು, ನಾನು ಯಾರೊಂದಿಗೆ ಕಮಿಟ್ ಆಗಿಲ್ಲ, ಕಮಿಟ್ ಮಾಡಿ ರಾಜಕೀಯ ಮಾಡುವ ಅಗತ್ಯವಿಲ್ಲ. ನಾನು ಡೇ ಟೈಮ್ ನಲ್ಲಿ ಯಡಿಯೂರಪ್ಪ ಅವರನ್ನ ಭೇಟಿ ಮಾಡುತ್ತೇನೆ. ಕಾಂಗ್ರೇಸ್ ನವರ ರೀತಿ ರಾತ್ರಿ ಭೇಟಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ನಾನಾಗಲಿ ದೇವೇಗೌಡರಾಗಲಿ ಅಧಿಕಾರದಲ್ಲಿರುವವರನ್ನ ಭೇಟಿ ಮಾಡುವುದು ರಾಜ್ಯದ ಸಮಸ್ಯೆಗಳಿಗೇ ಹೊರತು ವೈಯಕ್ತಿಕವಾದ ನಮ್ಮ ತೆವಲುಗಳನ್ನ ತೀರಿಸಿಕೊಳ್ಳುವುದಕ್ಕೆ ಅಲ್ಲ. ರಾಜ್ಯದ ಜನರ ವಿಚಾರಕ್ಕೆ ಹೋಗಿದ್ದೆ. ನಾನು ಬಿಜೆಪಿ ಜೊತೆಗೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿರೋದು ಸರ್ಕಾರದ ಹಣವನ್ನೇ ಕೊಟ್ಟಿರೋದು ನನ್ನ ಮನೆಯಿಂದ ತಂದುಕೊಟ್ಟಿಲ್ಲ. ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ಅವರ ಸಿದ್ದರಾಮನ ಹುಂಡಿಯಿಂದ ತಂದಿಲ್ಲ. ಅದನ್ನು ಸರ್ಕಾರದ ಹಣದಿಂದಲೇ ಮಾಡಿರೋದು, ಹಲವಾರು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯರಿಗೆ ಇದರ ಬಗ್ಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು.