ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ, ಕಡಿಮೆ ಬೆಲೆಯ ಫೋನ್ ನೀಡಿದ ಬಳಿಕ ಜಿಯೋ ಕಂಪನಿ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ,
ಈ ಲ್ಯಾಪ್‌ಟಾಪ್‌ಗೆ ಜಿಯೋಬುಕ್ ಎಂದು ಹೆಸರನ್ನು ಇಡಲಾಗಿದ್ದು ಕಸ್ಟಮೈಸ್ಡ್ ಆಂಡ್ರಾಯ್ಡ್ ಓಎಸ್ ಇರಲಿದೆ. ಇದರಲ್ಲಿ ಜಿಯೋ ಅಪ್‌ಗಳು ಇನ್ ಬಿಲ್ಟ್ ಇರಲಿದ್ದು 4ಜಿ ಎಲ್‌ಟಿಇ ಬೆಂಬಲ ನೀಡಲಿದೆ ಎಂದು ʼಎಕ್ಸ್‌ಡಿಎ ಡೆವಲಪರ್ಸ್ʼ ವರದಿ ಮಾಡಿದೆ.
ಕೊರೊನಾ ಸಮಯದಲ್ಲಿ ಫೋನ್ ಮೂಲಕ ವ್ಯವಹಾರ ನಡೆಸುತ್ತಿರುವ ಗ್ರಾಹಕರ ಗಮನದಲ್ಲಿಟ್ಟುಕೊಂಡು ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ.
ಮಾಧ್ಯಮಗಳಲ್ಲಿ ಪ್ರಕಟವಾದಂತೆ ಚೀನಾದ ಬ್ಲೂಬ್ಯಾಂಕ್ ಕಮ್ಯೂನಿಕೇಷನ್ ಟೆಕ್ನಾಲಜಿ ಜೊತೆ ಸೇರಿ ಈ ಲ್ಯಾಪ್‌ಟಾಪ್ ತಯಾರಿಸಲು ಮಾತುಕತೆ ನಡೆದಿದೆ. ಈಗಾಗಲೇ ಜಿಯೋ ಫೋನ್ ಮಾದರಿಯನ್ನು ಈ ಕಂಪನಿ ತಯಾರಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲೇ ಈ ಯೋಜನೆ ಆರಂಭವಾಗಿದ್ದು, ಉತ್ಪನ್ನ ಈಗ ಅಂತಿಮ ಹಂತದಲ್ಲಿದೆ. ಏಪ್ರಿಲ್ ವೇಳೆಗೆ ಉತ್ಪನ್ನದ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಬಿಡುಗಡೆಯಾದ ಚಿತ್ರದಲ್ಲಿ ವಿಂಡೋಸ್ ಕೀ ಇದೆ. ಆದರೆ ಇದು ವಿಂಡೋಸ್ ಕೀ ಅಲ್ಲ.
1,366*768 ಪಿಕ್ಸೆಲ್, ಕ್ವಾಲಕಂ ಸ್ನಾಪ್‌ಡ್ರಾಗನ್ 665 ಎಸ್‌ಒಸಿ ಪ್ರೊಸೆಸರ್, ಸ್ನಾಪ್‌ಡ್ರಾಗನ್ ಎಕ್ಸ್ 12 4ಜಿ ಮೊಡೆಮ್, 2 ಜಿಬಿ ರಾಮ್, ಮಿನಿ ಎಚ್‌ಡಿಎಂಐ ಕನೆಕ್ಟರ್, ಡ್ಯುಯಲ್ ಬ್ಯಾಂಡ್ ವೈಫೈ, ಬ್ಲೂಟೂತ್ ಜೊತೆಗೆ ಜಿಯೋ ಸ್ಟೋರ್, ಜಿಯೋ ಮೀಟ್, ಜಿಯೋ ಪೇಜ್ ಆಪ್‌ಗಳು ಮೊದಲೇ ಇನ್‌ಸ್ಟಾಲ್ ಆಗಿರಲಿದೆ.
ಈ ಲ್ಯಾಪ್‌ಟಾಪ್ ಬೆಲೆ ಎಷ್ಟಿರಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಬಜೆಟ್ ಸೆಗ್ಮೆಂಟ್ ದರದಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಕೊರೊನಾ ವೈರಸ್ ಬಂದ ನಂತರ ಕಚೇರಿಗಳು ಮುಚ್ಚಲ್ಪಟ್ಟಿದ್ದು ಮನೆಯಿಂದಲೇ ಕೆಲಸಗಳು ನಡೆಯುತ್ತಿದೆ. ಹೀಗಾಗಿ ಲ್ಯಾಪ್‌ಟಾಪ್‌ಗಳ ಬೇಡಿಕೆ ದಿಢೀರ್ ಹೆಚ್ಚಾಗಿದೆ. ಇದರಿಂದಾಗಿ ಡೆಲ್, ಎಚ್‌ಪಿ ಮತ್ತು ಲೆನೆವೊ ಕಂಪನಿಗಳು ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಭಾರೀ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿದೆ. ಈ ಕಾರಣಕ್ಕೆ ಜಿಯೋ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ನಿರ್ಮಾಣಕ್ಕೆ ಮುಂದಾಗಿದೆ.