ಬೀದರ್ : ಕೊರೊನಾ ಮಹಾಮಾರಿಗೆ ಕಳೆದ 10 ದಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶತಾಯುಷಿ ಅಜ್ಜ ಕೊರೊನಾವನ್ನು ಗೆದ್ದು ರಾಜ್ಯದ ಗಮನ ಸೆಳೆದಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ 101 ವರ್ಷದ ಶಿವಲಿಂಗಪ್ಪ ಮಲಶೆಟ್ಟೆಪ್ಪ ಕೊರೊನಾ ದಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ವೃದ್ಧ ವಾಸಿಯಾಗಿರುವ ಹಿನ್ನೆಲೆ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.
ಮೇ 15ರಂದು ಕೋವಿಡ್ ಸೋಂಕಿತರಾಗಿ ಭಾಲ್ಕಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ,ಶತಾಯುಷಿ ಅಜ್ಜ 10 ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾಲ್ಕಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಶತಾಯುಷಿ ಅಜ್ಜನಿಗೆ ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.
ಶತಾಯುಷಿ ಅಜ್ಜ ಕೊರೊನಾ ಗೆದ್ದು ನಿವಾಸಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು ಪಟಾಕಿ ಸಿಡಿಸಿ ಬರಮಾಡಿಕೊಂಡು ಸಂಭ್ರಮಾಚರಣೆ ಮಾಡಿದ್ದಾರೆ. ಕೋವಿಡ್ ಪಾಸಿಟಿವ್ ಎಂದಾ ಕ್ಷಣವೇ ಕೆಲವರು ಭಯಭೀತರಾಗುತ್ತಾರೆ ಆದರೆ ಇಳಿವಯಸ್ಸಿನಲ್ಲೂ ಶಿವಲಿಂಗಪ್ಪ ತಮಗೆ ಕೊರೊನಾ ಬಂದಿದೆ ಎಂದು ಗೊತ್ತಾದರೂ ಧೈರ್ಯದಿಂದ ಎದುರಿಸಿ ಕೊರೊನಾವನ್ನೆ ಗೆದ್ದಿದ್ದಾರೆ.
101 ವರ್ಷದ ನಮ್ಮ ತಂದೆಗೆ ಕೊರೋನಾ ಪಾಸಿಟಿವ್ ಧೃಡವಾಗಿತ್ತು,ಕಳೆದ 10 ದಿನಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಂದೆಯವರು ಕೊರೊನಾ ದಿಂದ ಗುಣಮುಖರಾದ ಕಾರಣ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವೃದ್ಧರ ಮಗ ವೈಜನಾಥ್ ಬೋರೆ ಹರ್ಷ ವ್ಯಕ್ತಪಡಿಸಿದ್ದಾರೆ.