ಶಿವಮೊಗ್ಗ: ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅನೇಕ ಜನರಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸಿ ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀದೇವಿ ಹೇಳಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಮಿತಿ ಮತ್ತು ಕೊರೊನಾ ಕಾರ್ಯಪಡೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೊರೊನಾ ಎರಡನೇ ಅಲೆಗೆ ಗ್ರಾಮೀಣ ಭಾಗದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೂರನೇ ಅಲೆಗೆ ಮುನ್ನೆಚ್ಚರಿಕೆ ವಹಿಸಿದರೆ ಅಪಾಯವನ್ನು ತಡೆಗಟ್ಟಬಹುದು ಎಂದಿದ್ದಾರೆ.
ಅನಗತ್ಯ ಓಡಾಟ ಕಡಿಮೆ ಮಾಡಿ, ಸೋಂಕಿತರಿಗೆ ಧೈರ್ಯ ತುಂಬಬೇಕು. ನೆರೆಹೊರೆಯವರು ಸಹ ಕಾಳಜಿ ವಹಿಸಿ ಕೊರೊನಾ ಸೋಂಕಿತರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದ್ದಾರೆ. ಕೊರೊನಾ ಹತೋಟಿಗೆ ತರಲು ಎಲ್ಲರೂ ಸಹಕಾರ ನೀಡಬೇಕು. ಪ್ರತಿ ಗ್ರಾಮದಲ್ಲೂ ಸಾಮೂಹಿಕವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಜೊತೆಗೆ ವ್ಯಾಕ್ಸಿನ್ ಕೂಡಾ ಹಾಕಲಾಗುತ್ತಿದ್ದು, ವ್ಯಾಕ್ಸಿನ್ ಪಡೆಯದವರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಬ್ಬಂದಿಗೆ ವಿಪತ್ತು ನಿರ್ವಹಣೆ ಹಾಗೂ ಕೊರೊನಾ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಹಿರೇಬಿಲಗುಂಜಿ ಗ್ರಾ.ಪಂ. ಅಧ್ಯಕ್ಷೆ ವೀಣಾ ಜಗದೀಶ್, ಉಪಾಧ್ಯಕ್ಷ ಸೋಮಶೇಖರ ಕುಣಿಕೇರಿ, ಗ್ರಾಮ ಲೆಕ್ಕಿಗ ಪಕಿರೇಶ್, ಕಾರ್ಯದರ್ಶಿ ರಿತೇಶ್ ಮತ್ತಿತರರು ಭಾಗವಹಿಸಿದ್ದರು.ಇದನ್ನೂ ಓದಿ:ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್