– ಅಂಕಪಟ್ಟಿಯಲ್ಲಿ ಆರ್ ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಚೆನ್ನೈ
ಮುಂಬೈ: ಫಾಫ್ ಡು’ಪ್ಲೆಸಿಸ್ ಭರ್ಜರಿ 95 ರನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧ ಶತಕದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 18 ರನ್‍ಗಳಿಂದ ಜಯ ಸಾಧಿಸಿದೆ.
ಗೆಲ್ಲಲು 221 ರನ್‍ಗಳ ಕಠಿಣ ಸವಾಲು ಪಡೆದ ಕೋಲ್ಕತ್ತಾ, 20 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಆರಂಭದಿಂದಲೂ ಮುಗ್ಗರಿಸಿದ್ದರಿಂದ ಕೋಲ್ಕತ್ತಾಗೆ ಕಠಿಣ ಸವಾಲನ್ನು ಸರಿಗಟ್ಟುವಲ್ಲಿ ಸಾಧ್ಯವಾಗಲಿಲ್ಲ. ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ದಿನೇಶ್ ಕಾರ್ತಿಕ್ ಹೊರತುಪಡಿಸಿ ಉಳಿದ ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ ಕೋಲ್ಕತ್ತಾ ಸೋಲನುಭವಿಸುವಂತಾಯಿತು. ಸತತವಾಗಿ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೇಲಕ್ಕೆ ಜಿಗಿದಿದ್ದು, ಆರ್ ಸಿಬಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.
Advertisement
Advertisement
ಆಂಡ್ರೆ ರಸೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 54 ರನ್ (22 ಎಸೆತ, 3 ಬೌಂಡರಿ, 6 ಸಿಕ್ಸ್) ಸಿಡಿಸಿ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ನೀಡಿದರು. ಆದರೆ 11.2ನೇ ಓವರ್‍ನಲ್ಲಿ ಔಟಾದರು. ದಿನೇಶ್ ಕಾರ್ತಿಕ್ ಸಹ 40 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ 14ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್ ಔಟಾಗದೇ 66 ರನ್(34 ಎಸೆತ, 4 ಬೌಂಡರಿ, 6 ಸಿಕ್ಸ್) ಹೊಡೆದರು. ದೀಪಕ್ ಚಹರ್ 4 ವಿಕೆಟ್ ಕಿತ್ತರೆ, ಲುಂಗಿ ಎನ್ಗಿಡಿ 3 ಹಾಗೂ ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.
Advertisement
ಕೋಲ್ಕತ್ತಾ ಪರವಾಗಿ ಶುಭಮನ್ ಗಿಲ್ ಮೊದಲ ಓವರ್‍ನಲ್ಲೇ ಕೇವಲ ಒಂದು ಬಾಲ್ ಎದುರಿಸಿ ಸೊನ್ನೆಗೆ ಔಟಾದರೆ, ನಿತೀಶ್ ರಾಣಾ 9 ರನ್(12 ಎಸೆತ, 2 ಬೌಂಡರಿ) ಹೊಡೆದು 2ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ತಂಡದ ನಾಯಕ ಐಯಾನ್ ಮಾರ್ಗನ್ ಸಹ 7 ರನ್(7 ಎಸೆತ, 1 ಬೌಂಡರಿ) ಸಿಡಿಸಿ 4.3ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸುನಿಲ್ ನರೇನ್ 4 ರನ್ (3 ಎಸೆತ, 1 ಬೌಂಡರಿ) ಹೊಡೆದು ಇದೇ ಓವರ್ ಕೊನೆಯಲ್ಲಿ ಔಟಾದರು. ಈ ಮೂಲಕ ಕೋಲ್ಕತ್ತಾ ಮುಗ್ಗರಿಸಿತು. ಇನ್ನು ರಾಹುಲ್ ತ್ರಿಪಾಠಿ 8 ರನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ ಸೊನ್ನೆಗೆ ಔಟಾಗಿದ್ದಾರೆ.
Advertisement
ಚೆನ್ನೈ ಸೂಪರ್ ಕಿಂಗ್ಸ್ ಮಿಂಚಿನಾಟ
ಚೆನ್ನೈ ಕಟ್ಟಿ ಹಾಕಿ ಬಳಿಕ ಸುಲಭವಾಗಿ ಚೇಸ್ ಮಾಡಬಹುದೆಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ನಿರೀಕ್ಷೆ ಹುಸಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‍ಮ್ಯಾನ್‍ಗಳು ಕೋಲ್ಕತ್ತಾ ಬೌಲರ್‍ಗಳ ಬೆವರಿಳಿಸಿದ್ದಾರೆ. ಚೆನ್ನೈ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು’ಪ್ಲೆಸಿಸ್ ಆರಂಭಿಕ ಹಂತದಿಂದಲೇ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಾಯಕ್ವಾಡ್ ಅರ್ಧ ಶತಕ ಬಾರಿಸಿದರೆ, ಡು’ಪ್ಲೆಸಿಸ್ ಔಟಾಗದೆ ಬರೋಬ್ಬರಿ 95 ರನ್ ಪೇರಿಸುವ ಮೂಲಕ ಶತಕ ವಂಚಿತರಾದರು.
ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ ಋತುರಾಜ್ ಗಾಯಕ್ವಾಡ್, 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸರ್) ಪೇರಿಸುವ ಮೂಲಕ ತಂಡದ ರನ್‍ಗಳ ಮೊತ್ತ ಹೆಚ್ಚಲು ಕೊಡುಗೆ ನೀಡಿದರು. 2ನೇ ಓವರ್‍ನಿಂದಲೂ ಬೌಂಡರಿ ಸಿಕ್ಸ್ ಬಾರಿಸುತ್ತಲೇ ಆಟವಾಡಿದ್ದು, ಚೆನ್ನೈ ಅಭಿಮಾನಿಗಳನ್ನು ಖುಷಿಯಲ್ಲಿ ತೇಲಿಸಿದರು. ಆದರೆ 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿ ಬೇಸರ ಮೂಡಿಸಿದರು.
ಶತಕ ವಂಚಿತ ಡು’ಪ್ಲೆಸಿಸ್
ಫಾಫ್ ಡು’ಪ್ಲೆಸಿಸ್ ಕೋಲ್ಕತ್ತಾ ಬಾಲರ್‍ಗಳ ಬೆವರಿಳಿಸಿದ್ದು, ಅಮೋಘ 95 ರನ್ (60 ಎಸೆತ, 9 ಬೌಂಡರಿ, 4 ಸಿಕ್ಸ್) ಚಚ್ಚಿ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ಸಿಕ್ಸ್ ಫೋರ್‍ಗಳ ಸುರಿಮಳೆಗೈದಿದ್ದು, ಚೆನ್ನೈ ತಂಡದ ಅಭಿಮಾನಿಗಳಲ್ಲಿ ರೋಮಾಂಚವನ್ನುಂಟುಮಾಡಿದರು. ಆದರೆ ಶತಕ ವಂಚಿತರಾಗುವ ಮೂಲಕ ಬೇಸರ ಮೂಡಿಸಿದರು.
ಗಾಯಕ್ವಾಡ್ ಅರ್ಧ ಶತಕ
ಋತುರಾಜ್ ಗಾಯಕ್ವಾಡ್ ಸಹ ಆರಂಭಿಕ ಆಟಗಾರರಾಗಿ ಡು’ಪ್ಲೆಸಿಸ್ ಗೆ ಉತ್ತಮ ಸಾಥ್ ನೀಡಿದ್ದು, ಇಬ್ಬರೂ ತಾಮುಂದು ನಾ ಮುಂದು ಎಂದು ರನ್ ಚಚ್ಚುವ ಮೂಲಕ ಕೋಲ್ಕತ್ತಾ ಬೌಲರ್‍ಗಳ ನೀರಿಳಿಸಿದರು. ಭರ್ಜರಿ 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿ, 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು.
ನಾಯಕ ಮಹೇಂದ್ರ ಸಿಂಗ್ ಧೋನಿ ಮಿಂಚಿನಾಟಕ್ಕೆ ಮುಂದಾದರೂ ಹೆಚ್ಚು ಕಾಲ ನಿಲ್ಲಲಾಗಲಿಲ್ಲ. 17 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಪೇರಿಸಿ 18ನೇ ಓವರ್ ಕೊನೆಯಲ್ಲಿ ಕ್ಯಾಚ್ ನೀಡಿದರು. ಇದರಿಂದಾಗಿ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿತು. ಮೊಯೀನ್ ಅಲಿ ಸಹ ಉತ್ತಮ ರನ್‍ಗಳ ಮೊತ್ತ ದಾಖಲಿಸಿದ್ದು, 25 ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ 16.3 ನೇ ಓವರ್‍ನಲ್ಲಿ ಪೆವಿಲಿಯನ್ ಸೇರಿದರು. ಧೋನಿ ಔಟಾಗುತ್ತಿದ್ದಂತೆ ಆಗಮಿಸಿದ ರವೀಂದ್ರ ಜಡೇಜಾ ಒಂದೇ ಬಾಲ್ ಆಡಿ ಸಿಕ್ಸ್ ಚಚ್ಚಿ ಔಟಾಗದೆ ಉಳಿದರು.