ಚಿಕ್ಕಬಳ್ಳಾಪುರ: ಕೊರೊನಾ ಆತಂಕದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮವನ್ನ 3 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 30ರ ಬೆಳಗ್ಗೆ 06 ಗಂಟೆಯಿಂದ 2021 ಜನವರಿ 02ರ ಬೆಳಗ್ಗೆ 06 ಗಂಟೆಯವರೆಗೆ ನಂದಿಗಿರಿ ಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವ ಹಾಗೂ ಕೊರೊನಾ ವೈರಸ್ ಹರಡದಂತೆ ಜನ ಗುಂಪುಗೂಡುವುದನ್ನ ನಿರ್ಬಂಧಿಸುವ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ. ಹೊಸ ವರ್ಷಾಚರಣೆ ಹಿನ್ನೆಲೆ ನಂದಿಬೆಟ್ಟದಲ್ಲಿ ಪ್ರವಾಸಿಗರ ದಟ್ಟಣೆ, ಮೋಜು ಮಸ್ತಿ ಮಾಡುವುದರಿಂದ ಕೊರೊನಾ ವೈರಸ್ ಹರಡುವ ಆತಂಕವಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷ ವರ್ಷದ ಕೊನೆ ದಿನ ಡಿಸೆಂಬರ್ 31ರ ಸಂಜೆ 5 ಗಂಟೆಯ ನಂತರ ನಂದಿಗಿರಿಧಾಮ ಪ್ರವೇಶ ಬಂದ್ ಮಾಡಿ ಜನವರಿ 01 ರ ಬೆಳಗ್ಗೆ 08 ಗಂಟೆ ನಂತರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿ ನಂದಿಬೆಟ್ಟವನ್ನ ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲು ಆದೇಶ ಮಾಡಲಾಗಿದೆ.