ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಕೇಂದ್ರದ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಸಲ್ಲಿಸಿರುವ ಚಾರ್ಜ್‍ಶೀಟ್ ಪೂರ್ವ ನಿರ್ದೇಶಿತ ಮತ್ತು ಎಸ್ಡಿಪಿಐ ಪಕ್ಷವನ್ನು ಗುರಿಯಾಗಿಸಿ ರಚಿಸಿರುವುದು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಮಜೀದ್ ಖಾನ್ ಆರೋಪಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಜೀದ್ ಖಾನ್, ಈ ಪ್ರಕರಣದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ಸಂಘಪರಿವಾರದ ಒತ್ತಡದಿಂದ ಕೇಂದ್ರ ಬಿಜೆಪಿ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐ ಎ ಯನ್ನು ಕಳುಹಿಸಿತ್ತು. ಬಿಜೆಪಿ ಸರಕಾರದ ನಿರ್ದೇಶನದಂತೆ ಎನ್‍ಐಎ ದೆಹಲಿಯಿಂದಲೇ ಎಸ್ ಡಿಪಿಐ ವಿರುದ್ಧ ಎಫ್ ಐಆರ್ ದಾಖಲಿಸಿ ಬಂದಿತ್ತು. ಈ ಬಗ್ಗೆ ಕಳೆದ ಆರು ತಿಂಗಳಿನಲ್ಲಿ 2000ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ಜೆಡಿಎಸ್ ಮತ್ತಿತರ ಪಕ್ಷಗಳ ಮುಖಂಡರುಗಳು ನೇರ ಹೊಣೆಗಾರರು ಹಾಗೂ ಇದರಲ್ಲಿ ರಾಜಕೀಯ ಷಡ್ಯಂತ್ರ ಇದೆ ಎಂದು ಸ್ವತಃ ಅಲ್ಲಿಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ತನಿಖೆ ನಡೆಸಿದ ಸಿಸಿಬಿ ಹೇಳಿಕೆ ನೀಡಿರುವುದು ವರದಿಯಾಗಿದ್ದರೂ ತಪ್ಪಿತಸ್ಥರು ಸುಲಭವಾಗಿ ಜಾಮೀನಿನಲ್ಲಿ ಬಿಡುಗಡೆ ಹೊಂದಿರುವುದನ್ನು ಗಮನಿಸಿದರೆ ಅಮಾಯಕರನ್ನು ಸಿಲುಕಿಸಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
Advertisement
Advertisement
ಜಾಗತಿಕವಾಗಿ ತುಂಬಾ ಗೌರವಿಸಲ್ಪಡುವ ಪ್ರವಾದಿ ಮೊಹಮ್ಮದ್(ಸ.ಅ)ರವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಸಂಘಪರಿವಾರದ ಕಾರ್ಯಕರ್ತ ನವೀನ್ ಎಂಬಾತನ ಕೃತ್ಯದಿಂದ ಈ ಹಿಂಸಾಚಾರ ನಡೆದಿತ್ತು ಎಂಬುದು ವಾಸ್ತವ. ಆದರೂ ನವೀನ್ ನ ಮೇಲೆ ದುರ್ಬಲ ಕೇಸು ಹಾಕುವ ಮೂಲಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಮಾಜಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಫೈರೋಜ್ ಎಂಬಾತನನ್ನು ಯುಎಪಿಎ ಕೇಸಿನಲ್ಲಿ ಮುಖ್ಯ ಆರೋಪಿ ಮಾಡಲಾಗಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಧಾರ್ಮಿಕ ಭಾವನೆಗಳ ಬಗ್ಗೆ ಆರೋಪ-ಪ್ರತ್ಯಾರೋಪ ಹಾಕಿ ಕೊಂಡವರಾಗಿದ್ದಾರೆ. ಒಟ್ಟು ಹಿಂಸಾಚಾರದ ಮುಖ್ಯ ಕಾರಣ ಈ ಫೇಸ್ಬುಕ್ ಪೋಸ್ಟ್ ಗಳು ಎಂದು ತನಿಖಾಧಿಕಾರಿಗಳು ವರದಿ ಮಾಡಿದ್ದಾರೆ. ಆದರೆ ಇಲ್ಲಿ ಧರ್ಮಧಾರಿತ ತಾರತಮ್ಯ ನಡೆದಿರುವುದು ಕಾನೂನು ಬಾಹಿರವಾಗಿದೆ ಎಂದು ವಾಗ್ದಾಲಿ ನಡೆಸಿದ್ದಾರೆ.
Advertisement
ಎನ್ ಐಎ ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಆರಂಭದಿಂದಲೂ ನೇರವಾಗಿ ಎಸ್ ಡಿಪಿಐ ಯನ್ನು ಸಿಲುಕಿಸಲು ಪ್ರಯತ್ನಪಟ್ಟಿದ್ದಾರೆ. ಇದೇ ರೀತಿ ಭೀಮಾಕೋರೆಗಾವ್ ಹೋರಾಟ ಮಾಡಿದ ದಲಿತ ಹಾಗೂ ಪ್ರಗತಿಪರರ ಮೇಲೆ ಕೇಸು ಜಡಿಯಲಾಗಿತ್ತು. ದೆಹಲಿಯಲ್ಲಿ ಸಿಎಎ ಹಾಗೂ ಎನ್ ಆರ್ ಸಿ ಪ್ರತಿಭಟನೆ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ದೇಶದ್ರೋಹ ಕಾನೂನಿನಡಿ ಬಂಧಿಸಲಾಗುತ್ತಿದೆ. ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳು ಮತ್ತು ಆರ್ ಎಸ್ ಎಸ್ ನ ಫ್ಯಾಸಿಸ್ಟ್ ಸಿದ್ಧಾಂತದ ವಿರುದ್ಧ ಧ್ವನಿ ಎತ್ತುತ್ತಿರುವ ಪ್ರಗತಿಪರರನ್ನು, ರೈತರನ್ನು, ವಿದ್ಯಾರ್ಥಿಗಳನ್ನು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಳೆದ ಆರು ವರ್ಷಗಳಿಂದ ಮೋದಿ ಸರಕಾರ ಯುಎಪಿಎ, ಎನ್ ಎಸ್ ಎ ಹಾಗೂ ದೇಶದ್ರೋಹದಂತಹ ಕರಾಳ ಕೇಸುಗಳನ್ನು ಹಾಕಿ ಹಿಂಸಿಸುತ್ತಿರುವುದು ಖಂಡನೀಯ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ನುಡಿದರು.
ಬೆಂಗಳೂರು ಹಿಂಸಾಚಾರದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‍ರವರು ಬಿಡುಗಡೆಗೊಳಿಸಿದ ಸ್ವತಂತ್ರ ಬುದ್ಧಿಜೀವಿಗಳ ಸತ್ಯಶೋಧನಾ ವರದಿಯಲ್ಲಿ ರಾಜ್ಯ ಸರಕಾರದ ಮತ್ತು ಗುಪ್ತಚರ ಇಲಾಖೆಯ ವೈಫಲ್ಯದಿಂದ ಈ ಹಿಂಸಾಚಾರ ನಡೆದಿದೆ ಹಾಗೂ ತನಿಖಾ ಸಂಸ್ಥೆಗಳು ಎಸ್ ಡಿಪಿಐ ಪಕ್ಷವನ್ನು ಮತ್ತು ನಿರ್ದಿಷ್ಟ ಸಮುದಾಯವನ್ನು ಗುರಿ ಪಡಿಸುತ್ತಿರುವುದು ಸರಿಯಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ಸಂಘಪರಿವಾರ ಪ್ರಾಯೋಜಿತ ಸತ್ಯಶೋಧನಾ ವರದಿಯನ್ನೇ ಎನ್ ಐಎ ಆರೋಪಪಟ್ಟಿಯಲ್ಲಿ ನಕಲಿಸಲಾಗಿದೆ. ಈ ಬಗ್ಗೆ ಹಿಂಸಾಚಾರ ನಡೆದ ಮರುದಿನವೇ ಎಸ್ ಡಿಪಿಐ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಎನ್ ಐಎ ತನಿಖೆಯನ್ನು ಗಮನಿಸಿದರೆ ಕೆಲವು ನಿಷ್ಪಕ್ಷ ತನಿಖಾಧಿಕಾರಿಗಳ ಮೇಲೆ ನಿರ್ದಿಷ್ಟ ಪಕ್ಷ ಮತ್ತು ಸಮುದಾಯವನ್ನು ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಮಾಡುವಂತೆ ಒತ್ತಡ ಹೇರಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರಪರಾಧಿಗಳ ಪರ ಕಾನೂನಾತ್ಮಕ ಹೋರಾಟದಲ್ಲಿ ಮುಂಚೂಣಿಯಲ್ಲಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.