ಚಿತ್ರದುರ್ಗ: ಉಸಿರಾಟದ ತೊಂದರೆಯಿಂದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಗುಣಮುಖವಾಗಿ ಊರಿಗೆ ತೆರಳಲು, ಮಗನ ಬೈಕಲ್ಲಿ ಆಸ್ಪತ್ರೆಯಿಂದ ಹೊರ ಬರುತಿದ್ದಂತೆ ಗೇಟ್ ಬಳಿ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಖಾಸಗಿ ಆಸ್ಪತ್ರೆಯ ಗೇಟ್ ಬಳಿ ನಡೆದಿದೆ.
ಚಿತ್ರದುರ್ಗ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ ಶಿವಮ್ಮ(65) ಹಾಗೂ ಮಗ ಸಿದ್ದೇಶ್ ಮೃತ ದುರ್ದೈವಿಗಳು. ಕಳೆದ ಒಂದು ವಾರದಿಂದ ತನ್ನ ತಾಯಿ ಶಿವಮ್ಮಗೆ ಎದುರಾದ ಅನಾರೋಗ್ಯ ಸಮಸ್ಯೆಯಿಂದಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ಸಿದ್ದೇಶ್ ಅವರು, ತನ್ನ ತಾಯಿ ಇಂದು ಸಂಪೂರ್ಣ ಗುಣಮುಖರಾದರೆಂಬ ಸಂತಸದಲ್ಲಿ ಪತ್ನಿಯೊಂದಿಗೆ ಸ್ವಗ್ರಾಮವಾದ ಸೊಲ್ಲಾಪುರಕ್ಕೆ ಹೊರಟಿದ್ದರು.
ಬಿಡುಗಡೆ ಭಾಗ್ಯ ಸಿಕ್ಕಿದ್ದರಿಂದ ಇಂದು ಹುಟ್ಟೂರಿಗೆ ತೆರಳುವ ಅವಸರದಲ್ಲಿ ಆಸ್ಪತ್ರೆಯಿಂದ ಮೂವರು ಒಂದೇ ಬೈಕಿನಲ್ಲಿ ಹೊರಬಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಲಾರಿಯೊಂದು ಆಸ್ಪತ್ರೆ ಗೇಟ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇವರ ಬೈಕಿಗೆ ಡಿಕ್ಕಿಹೊಡೆದಿದೆ.
ಗುದ್ದಿದ ರಭಸಕ್ಕೆ ತಾಯಿ, ಮಗನ ದೇಹಗಳು ಛಿದ್ರವಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಸಿದ್ದೇಶ್ ಅವರ ಪತ್ನಿಗೆ ಬಲವಾದ ಪೆಟ್ಟಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದಂತಹ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.