ಹಾಸನ: ನಾನು ಕಳೆದ 15 ದಿನಗಳಿಂದ ಹೇಳುತ್ತಲೇ ಇದ್ದೇನೆ ನನ್ನ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಡಿಸಿ ಕೊಡುತ್ತಿಲ್ಲ. ಹಿಂಗಾದ್ರೆ ನಮ್ ಜನ ಸಾಯಲ್ವ. ನಮ್ಮ ಕ್ಷೇತ್ರಕ್ಕೆ ದುಡ್ಡು ಕೊಡಿಸಿ, ಇಲ್ಲ ಸಭೆಯನ್ನು ನೀವೇ ಮಾಡ್ಕೊಳ್ಳಿ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ಸಭೆಯಿಂದ ಹೊರ ನಡೆಯುವ ನಾಟಕೀಯ ಬೆಳವಣಿಗೆ ಹಾಸನದ ಹೊಯ್ಸಳ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯ್ತಿನಲ್ಲಿ ಸಚಿವ ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗಿರೀಶ್ ಮಾತನಾಡಲು ಮುಂದಾದ್ರು. ಈ ವೇಳೆ ಡಿಸಿ ಮಾತನಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಚಿವ ರೇವಣ್ಣ, ಬೇಕಾದ್ರೆ ಸಚಿವರು ಮಾತನಾಡಲಿ. ಆದರೆ ನಮ್ಮ ಬೇಡಿಕೆಗೆ ಸ್ಪಂದಿಸದ ಡಿಸಿ ಮಾತನಾಡುವುದು ಬೇಡ ಎಂದು ಪಟ್ಟು ಹಿಡಿದಿದ್ದರು.
ಕಳೆದ 15ದಿನಗಳಿಂದ ಕ್ಷೇತ್ರದಲ್ಲಿ ಜನ ಸಾಯ್ತ ಇದ್ದಾರೆ. ಡಿಸಿಯವರು ಒಂದು ರೂಪಾಯಿ ಹಣ ಬಿಡುಗಡೆ ಮಾಡುತ್ತಿಲ್ಲ. ಮತ್ತೆ ನಾವ್ಯಾಕೆ ಶಾಸಕರಾಗಿ ನಮ್ಮ ಕ್ಷೇತ್ರದಲ್ಲಿ ಇರಬೇಕು. ಇವತ್ತಿನವರೆಗೆ ಒಂದು ಬಿಡಿಗಾಸು ಕೂಡ ಬಿಡುಗಡೆ ಮಾಡಿಲ್ಲ. ಇದರ ಜೊತೆಗೆ ಔಷಧಿಯು ಕೂಡ ಸರಿಯಾಗಿ ತಾಲೂಕಿಗೆ ಬರುತ್ತಿಲ್ಲ. ಹೀಗಾದರೆ ನಮ್ಮ ಜನರ ಪರಿಸ್ಥಿತಿಯನ್ನು ಯಾರಿಗೆ ಹೇಳುವುದು ಎಂದು ತಾವು ಕುಳಿತಿದ್ದ ಆಸನದಿಂದ ಎದ್ದು ಸಭೆಯಿಂದ ನಿರ್ಗಮಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ಓದಿ: ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ
ರೇವಣ್ಣನ ಮಾತಿನ ಮಧ್ಯೆ ಪ್ರವೇಶ ಮಾಡಿದ ಹಾಸನ ಶಾಸಕ ಪ್ರೀತಮ್ ಗೌಡ, ರೇವಣ್ಣನ ಆಕ್ರೋಶವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಸರ್ಕಾರ ಹೇಳಿದಂತೆ ಕೆಲಸ ಮಾಡುತ್ತಾರೆ. ನಿಮ್ಮ ಯಾವುದೇ ಕೆಲಸ ಬೇಕಾದ್ರು ಸರ್ಕಾರದಿಂದ ಮಾಡಿಸೋಣ. ನಾವು ಕೂಡ ನಿಮಗೆ ಸಾಥ್ ಕೊಡುತ್ತೇವೆ. ಎಲ್ಲದಕ್ಕೂ ಡಿಸಿ ಹೊಣೆಗಾರಿಕೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ರೇವಣ್ಣ ಸಭೆಯಿಂದ ಹೊರನಡೆಯಲು ಮುಂದಾದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನು ಶಾಸಕ ಪ್ರೀತಮ್ ಗೌಡ ಮನವೊಲಿಸುವ ಮೂಲಕ ವಾಪಸ್ ಅವರ ಸ್ಥಳಕ್ಕೆ ಕೂರಿಸಿ, ಸಭೆಯ ಗದ್ದಲವನ್ನು ತಿಳಿಗೊಳಿಸಿದರು.