– ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್
– ರಾತ್ರಿ 9 ಬಳಿಕ ಬಿಡುಗಡೆಯಾದ ಅಧಿಕಾರಿಗಳು
ಕಾರವಾರ: ಕೆಲಸ ಆಗುವವರೆಗೂ ಧರಣಿ ಕೂರುತ್ತೇನೆ. ಇಂದು ಎಲ್ಲಿಗೂ ಹೋಗೊಲ್ಲ ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ಕುಳಿತ ಪ್ರಸಂಗ ಇಂದು ನಡೆದಿದೆ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಕಚೇರಿಯಿಂದ ಹೊರ ನಡೆದು ಮಂಗಳವಾರದವರೆಗೆ ಅಧಿಕಾರಿಗಳಿಗೆ ಸಮಯ ನೀಡಿದ್ದಾರೆ.
ಹೌದು. ಈ ಕೋಪಕ್ಕೆ ಕಾರಣವೂ ಇದೆ. ಗುರುವಾರ ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾಹ್ನದ ವೇಳೆ ಜಿಲ್ಲೆಯಲ್ಲಿನ 231 ಗ್ರಾಮ ಪಂಚಾಯ್ತಿಗಳಿಗೆ ಉಚಿತ ಬಿಎಸ್‍ಎನ್‍ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈಪೈ ನೀಡಲಾಗಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಸ್‍ಎನ್‍ಎಲ್‍ನ ಜಿಎಂ ಆರ್.ವಿ.ಜನ್ನು ದಾಖಲೆಗಳನ್ನು ನೀಡಿದರು. ಆದರೆ ಜಿಲ್ಲೆಯಲ್ಲಿ ಉಚಿತ ವೈಫೈ ನೀಡಿರುವ ಪೈಕಿ ಕೇವಲ 148 ಗ್ರಾಮ ಪಂಚಾಯ್ತಿಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 62 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
Advertisement
Advertisement
ಇದಲ್ಲದೇ ಈ ಹಿಂದೆ ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯದ ಕಾರ್ಯಕ್ರಮದಲ್ಲಿ ಬಿಎಸ್‍ಎನ್‍ಎಲ್‍ನ ನೆಟ್‍ವರ್ಕ್ ಸಮಸ್ಯೆ ಸರಿಪಡಿಸುವಂತೆ ಜನರು ಕೇಳಿಕೊಂಡಿದ್ದರು. ಹೀಗಾಗಿ ಈ ಕುರಿತು ಸಹ ಪಬ್ಲಿಕ್ ಟಿವಿ ಸಂಸದರಿಗೆ ಮಾಹಿತಿ ನೀಡಿತ್ತು. ಬಿಎಸ್‍ಎನ್‍ಎಲ್‍ನ ಸುಳ್ಳುಮಾಹಿತಿ ಬಗ್ಗೆ ಬೆಳಕು ಚಲ್ಲಿತ್ತು. ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿಗಳಿಗಲ್ಲದೇ ಹಲವು ಮೊಬೈಲ್ ಟವರ್ ಸಿದ್ಧವಾಗಿದ್ದರೂ ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿತ್ತು. ಹೀಗಾಗಿ ಈ ವಿಷಯ ಕುರಿತು ಗರಂ ಆದ ಸಂಸದ ಅನಂತ್‍ಕುಮಾರ್ ಹೆಗ್ಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು.
Advertisement
Advertisement
ಅಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತರು. ಇದರಿಂದಾಗಿ ಬಿಎಸ್‍ಎನ್‍ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಾಕ್ ಆಗಿದ್ದರು.
ಈ ಮಧ್ಯೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂಸದರು, “ಒಂದು ವರ್ಷಗಳಿಂದ ಬಿಎಸ್‍ಎನ್‍ಎಲ್, ಜಿಎಸ್‍ಎನ್‍ಎಲ್, ಸಿಎಸ್‍ಎ ತಮ್ಮ ಆಂತರಿಕ ಜಗಳದಿಂದ ಗ್ರಾಮ ಪಂಚಾಯ್ತಿಗಳಿಗೆ ವೈಫೈ ನೀಡದೆ ಇಡೀ ಗ್ರಾಮ ಪಂಚಾಯ್ತಿ ಕಾರ್ಯ, ಚಟುವಟಿಕೆ ನಿಂತುಹೋಗುವಂತಾಗಿದೆ. ಇಂದೇ ಎಲ್ಲಾ ಸಮಸ್ಯೆ ಬಗೆಹರಿಯಬೇಕು ಅಲ್ಲಿಯವರೆಗೂ ಕಚೇರಿ ಬಿಟ್ಟು ತೆರಳುವುದಿಲ್ಲ ಇಲ್ಲಿಯೇ ಧರಣಿ ಕೂರುತ್ತೇನೆ, ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದರು.
ಅಧಿಕಾರಿಗಳು ಸಹ ಸಂಸದರ ಈ ದಿಢೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದರನ್ನು ಓಲೈಸುವ ಕೆಲಸ ಮಾಡಿದರು. ಬಳಿಕ ಸುಮಾರು ರಾತ್ರಿ 9 ಗಂಟೆ ಸುಮಾರಿಗೆ ಸಂಸದರು ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.