-ವೆಂಟಿಲೇಟರ್ ಗಳು ಹಾಸನ ತಲುಪುವವರೆಗೂ ಫಾಲೋಅಪ್ ಮಾಡಿದ ಡಾ.ಅಶ್ವತ್ಥನಾರಾಯಣ
ಹಾಸನ: ಹಾಸನ ಜಿಲ್ಲೆಯ ಪ್ರವಾಸದ ವೇಳೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣರವರು ಶನಿವಾರ ಹೇಳಿದ್ದಂತೆ ಕೋವಿಡ್ ಸೋಂಕಿತರಿಗೆ ಬಳಕೆ ಮಾಡಲು 30 ವೆಂಟಿಲೇಟರ್‍ಗಳನ್ನು ಕಳಿಸಿಕೊಡಲಾಯಿತು. ಇದರ ಜತೆಗೆ 25 ಆಮ್ಲಜನಕ ಸಾಂದ್ರಕಗಳನ್ನೂ ಕಳುಹಿಸಿಕೊಟ್ಟರು.
ಇವೆಲ್ಲವೂ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಹಾಸನ ಜಿಲ್ಲಾಡಳಿತವನ್ನು ತಲುಪಿವೆ. ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಜನ ಪ್ರತಿನಿಧಿಗಳು ಕೂಡ ವೆಂಟಿಲೇಟರ್ ಹಾಗೂ ಆಮ್ಲಜನಕ ಸಾಂದ್ರಕಗಳ ಕೊರತೆಯಾಗಿರುವ ಅಂಶವನ್ನು ಡಿಸಿಎಂ ಗಮನಕ್ಕೆ ತಂದಿದ್ದರು. ಕಾರಣಾಂತರಗಳಿಂದ ಜಿಲ್ಲೆಗೆ ವೆಂಟಿಲೇಟರ್‌ಗಳನ್ನು ಒದಗಿಸುವುದು ವಿಳಂಬವಾಗಿತ್ತು.
ಈ ವಿಷಯ ಹಾಸನದ ಕೋವಿಡ್ ಪರಿಶೀಲನೆ ಸಭೆಯಲ್ಲಿ ಪ್ರಸ್ತಾಪ ಆದ ಕ್ಷಣವೇ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ಕರೆ ಮಾಡಿದ ಡಿಸಿಎಂ ತಕ್ಷಣವೇ ಜಿಲ್ಲೆಗೆ ಅಗತ್ಯ ಇರುವಷ್ಟು ವೆಂಟಿಲೇಟರ್‌ಗಳನ್ನು ಒದಗಿಸುವಂತೆ ಸೂಚಿಸಿದ್ದರು.
ಅಲ್ಲದೆ, ಸಭೆ ಮುಗಿಸಿಕೊಂಡು ಬೆಂಗಳೂರಿಗೆ ಹೊರಟ ಡಿಸಿಎಂ, ಮಾರ್ಗ ಮಧ್ಯೆಯೇ ಮತ್ತೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಕೊಟ್ಟರು. ವೆಂಟಿಲೇಟರ್‌ಗಳು ಅವು ಬೆಂಗಳೂರಿನಿಂದ ಹಾಸನ ತಲುಪುವ ತನಕ ನಿರಂತರ ಫಾಲೋಅಪ್ ಮಾಡಿದರು.
ವೆಂಟಿಲೇಟರ್‌ಗಳು ಬಹಳ ಮುಖ್ಯ: ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಅಶ್ವತ್ಥನಾರಾಯಣ ಅವರು, “ಕೋವಿಡ್ ನಂಥ ಸೋಂಕಿಗೆ ತುತ್ತಾದವರಿಗೆ ವೆಂಟಿಲೇಟರ್‍ಗಳ ಅಗತ್ಯ ಹೆಚ್ಚಾಗಿರುತ್ತದೆ. ಸ್ಥಳೀಯ ಮಟ್ಟದಲ್ಲೇ ಜೀವ ಉಳಿಸಬಹುದು. ಶನಿವಾರ ಹಾಸನ ಜಿಲ್ಲೆಯ ಪರಿಸ್ಥಿತಿ ಪರಿಶೀಲನೆ ಮಾಡಿದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ಪರಿಸ್ಥಿತಿಯ ತೀವ್ರತೆ ಗೊತ್ತಾಯಿತು. ಇಪ್ಪತ್ತನಾಲ್ಕು ಗಂಟೆಗಳಲ್ಲಿಯೇ 30 ವೆಂಟಿಲೇಟರ್‌ಗಳನ್ನು ಹಾಸನಕ್ಕೆ ಕಳಿಸಿಕೊಟ್ಟಿದ್ದೇವೆ. ಇಂಥ ಸಂಕಷ್ಟ ಸಮಯದಲ್ಲಿ ಕ್ಷಿಪ್ರವಾಗಿ ಕೆಲಸ ಮಾಡಬೇಕಾದುದು ನಮ್ಮೆಲ್ಲರ ಜವಾಬ್ದಾರಿ” ಎಂದರು.